ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ನರಕ ಚತುರ್ದಶಿ ಆಚರಣೆ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ನರಕ ಚತುರ್ದಶಿ ಆಚರಣೆ ಮಾಡಲಾಯಿತು. ಈ ಮಠದ ಚಂದ್ರ ಶಾಲೆಯಲ್ಲಿ ಎಣ್ಣೆ ಶಾಸ್ತ್ರ ಕಾರ್ಯಕ್ರಮ ನೆರವೇರಿತು.
ಮಠದ ಚಂದ್ರ ಶಾಲೆಯಲ್ಲಿ ಎಣ್ಣೆ ಶಾಸ್ತ್ರ ಕಾರ್ಯಕ್ರಮ ನಡೆದಿದ್ದು, ಪೇಜಾವರ ವಿಶ್ವೇಶತೀರ್ಥ, ಪೇಜಾವರ ವಿಶ್ವಪ್ರಸನ್ನ ತೀರ್ಥ, ಕಾಣಿಯೂರು ಶ್ರೀ, ಸೋದೆ ಸ್ವಾಮೀಜಿ ಉಪಸ್ಥಿತಿಯಲ್ಲಿ ನೂರಾರು ಭಕ್ತರಿಗೆ ಸ್ವಾಮೀಜಿಗಳು ತೈಲ ಅಭ್ಯಂಜನ ಮಾಡಿಸಿದ್ದಾರೆ.
ಈ ಸಂದರ್ಭದಲ್ಲಿ ಪೇಜಾವರ ಕಿರಿಯ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಸೋದೆ ಮಠಾಧೀಶ ವಿಶ್ವವಲ್ಲಭ ಶ್ರೀಪಾದರು ತಮ್ಮ ಶಿಷ್ಯರೊಂದಿಗೆ ಕಬಡ್ಡಿಯಾಡಿದರು. ಮಠಾಧೀಶರ ಈ ಕಬಡ್ಡಿ ಶಿಷ್ಯರಿಗೆ ಮತ್ತು ಭಕ್ತರಿಗೆ ವಿಶೇಷ ಸ್ಫೂರ್ತಿ ತುಂಬಿತು.
ಇದಕ್ಕೂ ಮೊದಲು ಹಬ್ಬದ ಅಂಗವಾಗಿ ಶ್ರೀ ಕೃಷ್ಣ ಮಠದಲ್ಲಿ ಜಲ ಪೂರಣ ಗಂಗಾ ಪೂಜೆ ನಡೆಸಲಾಯಿತು. ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಗಂಗಾಪೂಜೆಯನ್ನು ಮಠದ ಪುರೋಹಿತರಾದ ವೇ. ಮೂ. ಗೋಪಾಲಕೃಷ್ಣ ಆಚಾರ್ಯರು ನೆರವೇರಿಸಿದರು.