Home Mangalorean News Kannada News ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ – ಅದ್ದೂರಿಯ ಶ್ರಾವಣ ಸಂಭ್ರಮ

ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ – ಅದ್ದೂರಿಯ ಶ್ರಾವಣ ಸಂಭ್ರಮ

Spread the love

ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ – ಅದ್ದೂರಿಯ ಶ್ರಾವಣ ಸಂಭ್ರಮ

ಶಿರ್ವ: ಶ್ರಾವಣ ಮಾಸದಲ್ಲಿ ಮಹಿಳೆಯರದ್ದೇ ಸಂಭ್ರಮ. ಸಾಲು ಸಾಲು ಹಬ್ಬಗಳ ಸಂಭ್ರಮ. ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಜೊತೆಗೆ ಪ್ರಕೃತಿಪೂಜೆ ಗೂ ಶ್ರಾವಣ ಮಾಸದಲ್ಲಿ ಬಹಳ ಮಹತ್ವವನ್ನು ಕೊಡಲಾಗುತ್ತದೆ. ನಾಗರ ಪಂಚಮಿ, ಚೂಡಿ ಪೂಜೆ ಇತ್ಯಾದಿ ಸಂಪ್ರದಾಯಗಳು ಪ್ರಕೃತಿ ಪೂಜೆಯನ್ನು ಬಿಂಬಿಸುತ್ತವೆ ಎಂದು ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ  ವೀಣಾ ನಾಯಕ್ ಅವರು ಹೇಳಿದರು.

ಶಿರ್ವ ಗ್ರಾಮದ ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗದ ವತಿಯಿಂದ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಚೆಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶ್ರಾವಣ ಸಂಭ್ರಮ ಕಾರ್ಯಕ್ರಮದ ರೂಪು ರೇಷೆ, ಉದ್ದೇಶಗಳನ್ನು ತಿಳಿಸುವುದರೊಂದಿಗೆ ಸರ್ವರನ್ನೂ ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಇನ್ನಂಜೆಯ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮಂಜುಳಾ.ಎಸ್ನಾಯಕ್ ಅವರು ಉಪಸ್ಥಿತರಿದ್ದು ಚೆಂಡೆ ಬಳಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆರಂಭದಲ್ಲಿ ಸವಿತಾ ಮುರಳೀಧರ್ ನಾಯಕ್ ಅವರ ತಂಡದಿಂದ ನೃತ್ಯ ಹಾಗೂ ಸಂಗೀತದ ಕಾರ್ಯಕ್ರಮ ಸಾಂಸ್ಕೃತಿಕ ಸೌರಭ ಪ್ರದರ್ಶನಗೊಂಡಿತು.

ಇದೇ ವೇದಿಕೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.ಅನಾರೋಗ್ಯ ಪೀಡಿತ ರೋಗಿಗಳಿಗಿಬ್ಬರಿಗೆ ಅವರ ಚಿಕಿತ್ಸೆಗೆಂದು ಧನಸಹಾಯ ಮಾಡಲಾಯಿತು.ಚೆಂಡೆ ಬಳಗವು ತನ್ನ ಈ ಕಾರ್ಯಕ್ರಮದಲ್ಲಿ ಹಿರಿಯ ದಂಪತಿಗಳಿಬ್ಬರನ್ನು ಗೌರವಿಸುವ ನೂತನ ಯೋಜನೆಯೊಂದನ್ನು ಹಮ್ಮಿಕೊಂಡಿದ್ದು ಈ ವೇದಿಕೆಯಲ್ಲಿ ವೈವಾಹಿಕ ಬದುಕಿನ 63 ಸಂವತ್ಸರಗಳನ್ನು ಜೊತೆಯಾಗಿ ಕಳೆದಿರುವ ಶ್ರೀ ನಾರಾಯಣ ಪ್ರಭು ಹಾಗೂ ಶ್ರೀಮತಿ ಜಯಂತಿ ಪ್ರಭು ದಂಪತಿಗಳನ್ನು ಗೌರವಿಸಲಾಯಿತು.

ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡುವುದರ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಸಾಧನೆ ಮಾಡಿರುವ ಡಾ.ಕಸ್ತೂರಿ ನಾಯಕ್,ಡಾ.ಶ್ವೇತಾ ಚಿದಾನಂದ ಕಾಮತ್ ಹಾಗೂ ನಾಟಿ ವೈದ್ಯರಾದ. ಶ್ರೀ ಹರೀಶ್ ಚಂದ್ರ ಪ್ರಭು, ಪೆರ್ನಾಲ್ ಈ ಸಾಧಕ ತ್ರಯರನ್ನು ಅತಿಥಿಗಳ ಸಮ್ಮುಖದಲ್ಲಿ ಅಭಿನಂದಿಸಲಾಯಿತು.

ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ  ಶಶಿಧರ್ ವಾಗ್ಳೆ,ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ  ಕೆ.ಆರ್.ಪಾಟ್ಕರ್ ಅವರು ಗೌರವ ಉಪಸ್ಥಿತಿಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಸುಮಂಗಲಿಯರಿಗೂ ಶ್ರಾವಣ ಮಾಸದ ಸಂಪ್ರದಾಯದಂತೆ ಉಡಿ ತುಂಬಿಸಿ ಗೌರವಿಸಲಾಯಿತು.

 ಸಂಜನಾ ಪಾಟ್ಕರ್ ಅವರ ಪ್ರಾರ್ಥನೆ,ಶೈಲಜಾ ಪಾಟ್ಕರ್ ಅವರ ವರದಿ ವಾಚನ, ಭವಾನಿ ನಾಯಕ್ ಅವರ ನಿರೂಪಣೆ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದವು.  ಸಂಗೀತಾ ಪಾಟ್ಕರ್ ಹಾಗೂ ಕುಸುಮಾ ಕಾಮತ್ ಅತಿಥಿಗಳನ್ನು ಪರಿಚಯಿಸಿದರೆ ನೀಲವೇಣಿ ಪ್ರಭು,ವಿದ್ಯಾ ಹಾಗೂ ಸಂಜನಾ ಸನ್ಮಾನ ಪತ್ರಗಳನ್ನು ವಾಚಿಸಿದರು.ರೇಶ್ಮಾ ನಾಯಕ್ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿದರು.

ಇದೇ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಧನಸಹಾಯ ನೀಡಿದ ದಾನಿಗಳಿಗೆ ಶಾಲು ಹೊದಿಸಿ,ಹೂವಿನ ಗಿಡ ನೀಡುವುದರ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಶ್ರಾವಣ ಮಾಸದ ತಿಂಡಿ ತಿನಿಸುಗಳನ್ನು ಉಣಬಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ  ಪುಂಡಲೀಕ ಮರಾಠೆ, ದೇವಳದ ಅಧ್ಯಕ್ಷ   ಜಯರಾಮ ಪ್ರಭು ಗಂಪದ ಬೈಲು, ಉಪಾಧ್ಯಕ್ಷರಾದ   ಉಮೇಶ್ ಪ್ರಭು ಪಾಲಮೆ,ಹಿರಿಯ ಶಿಕ್ಷಕಿ  ಲೀಲಾವತಿ ಪಾಟ್ಕರ್,ಡಾ.ಚಿದಾನಂದ ಕಾಮತ್, ಬೆಂಗಳೂರು, ಭಾರತೀಯ ಸೇನೆಯಲ್ಲಿ ಹಲವಾರು ವರ್ಷಗಳ ಕಾಲ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ದಂಪತಿಗಳಾದ  ಕುಸುಮಾ ಮತ್ತು  ರಘುಪತಿ ಭಟ್, ಚೆಂಡೆ ಬಳಗದ ಸದಸ್ಯರಾದ  ಶೋಭಾ ಭಟ್,ಕಲಾವತಿ ನಾಯಕ್,ಆಶಾ ನಾಯಕ್, ಅಕ್ಷತಾ, ಸುನಿತಾ ನಾಯಕ್, ಶಕುಂತಲಾ ಪ್ರಭು, ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version