‘ಷಬ್-ಎ-ಬರಾತ್ ದಿನದಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ, ಖಬರ್‌ಸ್ತಾನ್‌ಗಳಿಗೆ ಭೇಟಿ ನೀಡುವಂತಿಲ್ಲ’
ಬೆಂಗಳೂರು: ಏಪ್ರಿಲ್ 9 ರಂದು ಮುಸ್ಲಿಂ ಸಮುದಾಯದ ಪವಿತ್ರ ರಾತ್ರಿ ಎಂದು ಆಚರಿಸಲಾಗುವ ಷಬ್-ಎ-ಬರಾತ್ ಇದ್ದು, ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಖಬರ್‌ಸ್ತಾನ್‌ಗಳಿಗೆ ಭೇಟಿ ನೀಡುವುದನ್ನು ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ಲಾಹುದ್ದೀನ್ ಜೆ ಗದ್ಯಾಲ್ ತಿಳಿಸಿದ್ದಾರೆ.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಷಬ್-ಎ ಬರಾತ್ ಅನ್ನು ಒಂದು ಪವಿತ್ರವಾದ ರಾತ್ರಿ ಎಂದು ಆಚರಿಸಲಾಗುತ್ತದೆ. ಜಗತ್ತಿನ ಎಲ್ಲ ಭಾಗದ ಮುಸ್ಲಿಮರು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುವ ಈ ಸಂದರ್ಭದಲ್ಲಿ ಇಡೀ ರಾತ್ರಿ ಮಸೀದಿಗಳಲ್ಲಿ ಸಾಮೂಹಿಕವಾಗಿ ಸೇರಿ ಪ್ರಾರ್ಥಿಸಲಾಗುತ್ತದೆ. ಆದರೆ ಈ ವರ್ಷ ಷಬ್ ಎ ಬರಾತ್ ಏಪ್ರಿಲ್ 9, 2020ರಂದು ಬಂದಿದೆ. ಆದರೆ ಕೋವಿಡ್ 19 ವ್ಯಾಪಕವಾಗಿ ವ್ಯಾಪಿಸುತ್ತಿರುವುದರಿಂದ ರಾಜ್ಯ ಸರ್ಕಾರ ನೀಡಿರುವ ವಿವಿಧ ಆದೇಶಗಳಾನುಸಾರ ನಿರ್ದೇಶನಗಳನ್ನು ಸಾಮೂಹಿಕ ಪ್ರಾರ್ಥನೆಗಳನ್ನು ಅಮಾನತುಮಾಡಿದೆ.
ಕರ್ನಾಟಕದ ಇಮಾರತ್-ಎ-ಶರಿಯಾ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದು, ಎಲ್ಲಾ ಮುಸಲ್ಮಾನ ಬಾಂಧವರು ಷಬ್ ಎ ಬರತ್ ದಿನ ಇವುಗಳನ್ನು ಅನುಸರಿಸಲು ತಿಳಿಸಲಾಗಿದೆ. ಈಗಾಗಲೇ ಖಬರಸ್ತಾನ್‌ಗಳು, ದರ್ಗಾ ಸಮಿತಿಗಳು ಈ ಕುರಿತು ನೋಟಿಸ್ ನೀಡಿವೆ. ಆದರೂ ಮಸೀದಿ, ಖಬರಸ್ತಾನ್ ಮತ್ತು ದರ್ಗಾಗಳ ಆಡಳಿತ ಮಂಡಳಿಗಳಿಗೆ ಮತ್ತೊಮ್ಮೆ ಒತ್ತಿ ಹೇಳುವ ಅಗತ್ಯವಿದೆ ಎಂದಿದ್ದಾರೆ. ಎಲ್ಲ ಆಡಳಿತ ಮಂಡಳಿಗಳು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಬಾರದು ಮತ್ತು ಕಬರಸ್ತಾನ್, ದರ್ಗಾಗಳ ಆಡಳಿತ ಮಂಡಳಿಗಳು ಸಾಮೂಹಿಕ ಪ್ರಾರ್ಥನೆಯನ್ನು ಅಮಾನತು ಮಾಡಬೇಕು.
ಯಾವುದೇ ರೀತಿಯಲ್ಲೂ ಧಾರ್ಮಿಕ ಆಚರಣೆಗಳನ್ನು ಖಬರಸ್ತಾನ್, ದರ್ಗಾಗಳಲ್ಲಿ ನಡೆಸಲು ಅವಕಾಶ ಮಾಡಿಕೊಡಬಾರದು. ಖಬರಸ್ತಾನ್, ದರ್ಗಾಗಳ ಪ್ರವೇಶ ದ್ವಾರಗಳ ಮುಚ್ಚಿರಬೇಕು ಎಂದು ಸೂಚಿಸಲಾಗುತ್ತಿದೆ. ಖಬರಸ್ತಾನ, ದರ್ಗಾಗಳ ಆಡಳಿತ ಮಂಡಳಿಗಳು ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಜಿಲ್ಲಾಮಟ್ಟದ ವಕ್ಫ್ ಸಲಹಾ ಸಮಿತಿಗಳ ಎಲ್ಲ ವಕ್ಫ್ ಅಧಿಕಾರಿಗಳು ಆದೇಶವನ್ನು ಪಾಲಿಸಬೇಕು. ಜೊತೆಗೆ ಈ ಆದೇಶ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ಆದೇಶಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ರೀತಿಯ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ತಬ್ಲೀಗಿ ಜಮಾತ್ ಸದಸ್ಯರಲ್ಲಿ ರಾಜ್ಯ ವಕ್ಫ್ ಮಂಡಳಿಯ ಮನವಿ:
2020ರ ಮಾರ್ಚ್ ನಲ್ಲಿ ದೆಹಲಿಯ ಮರ್ಕಜ್ ಹಝರತ್ ನಿಝಾಮುದ್ದೀನ್‌ನಲ್ಲಿ ತಬ್ಲೀಗಿ ಜಮಾತ್ ಸಮಾವೇಶ ನಡೆದಿದ್ದು, ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದವರು ಕೋವಿಡ್ 19 ಸೊಂಕು ಪತ್ತೆ ಪರೀಕ್ಷೆಗ ಒಳಗಾಗಬೇಕು ಎಂದು ತಬ್ಲೀಗಿ ಜಮಾತ್ ಸದಸ್ಯರಲ್ಲಿ ರಾಜ್ಯ ವಕ್ಫ್ ಮಂಡಳಿಯ ಮನವಿ ಮಾಡಿದೆ. ಈ ಸಮಾವೇಶದಲ್ಲಿ ರಾಜ್ಯದಿಂದ ಭಾರಿ ಸಂಖ್ಯೆಯಲ್ಲಿ ತಬ್ಲೀಗಿ ಜಮಾತ್ ಸದಸ್ಯರು ಪಾಲ್ಗೊಂಡಿದ್ದಾರೆ. ಬಳಿಕ ಬಹಳಷ್ಟು ಮಂದಿ ತಮ್ಮ ನಗರಗಳಿಗೆ ಹಾಗೂ ಮನೆಗಳಿಗೆ ಮರಳಿದ್ದಾರೆ. ಈ ಸದಸ್ಯರು ಕೋವಿಡ್ 19 ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದ್ದು ಅವರು ತಪ್ಪದೇ ಆರೋಗ್ಯ ಇಲಾಖೆಯ ಸಹಾಯವಾಣಿ 080-29711171ಗೆ ಸಂಪರ್ಕಿಸಬೇಕು. ಇಲ್ಲವಾದಲ್ಲಿ ಕೂಡಲೇ ಹತ್ತಿರದ ಜಿಲ್ಲಾ ಅಥವಾ ತಾಲೂಕು ಮಟ್ಟದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ಲಾಹುದ್ದೀನ್ ಜೆ ಗಡ್ಯಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಬ್ಲೀಗಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡ ಸದಸ್ಯರು ಸ್ವಯಂ ಪ್ರೇರಣೆಯಿಂದ ಆರೋಗ್ಯ ಇಲಾಖೆಯ ಸಹಾಯವಾಣಿ ಆರೋಗ್ಯವನ್ನು 080-29711171ಗೆ ಸಂಪರ್ಕಿಸಬೇಕು. ಇಲ್ಲವಾದಲ್ಲಿ ಕೂಡಲೇ ಹತ್ತಿರದ ಜಿಲ್ಲಾ ಅಥವಾ ತಾಲೂಕು ಮಟ್ಟದ ಆಸ್ಪತ್ರೆಗೆ ತೆರಳಿ ದೇಶದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ. ಜಿಲ್ಲಾ ವಕ್ಫ್ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಆರೋಗ್ಯ ತಪಾಸಣೆಗೆ ಅಗತ್ಯವಾದ ನೆರವು ಒದಗಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 080-46848600 / 080-66692000/ 9745697456/ ಸಹಾಯವಾಣಿ ಸಂಖ್ಯೆ -ಟೋಲ್ ಫ್ರೀ -104 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.