ಸಂಗೀತದಿಂದ ಸ್ವಸ್ಥ ಸಮಾಜ ನಿರ್ಮಾಣ: ಪತ್ರಕರ್ತ ವಸಂತ ಗಿಳಿಯಾರ್
ಕುಂದಾಪುರ: ಸಂಗೀತ ಹೇಳಿ ಅನುಭವಿಸುವುದಕ್ಕಿಂತಲೂ ಸಂಗೀತ ಕೇಳಿ ಅನುಭವಿಸುವುದರಲ್ಲಿ ಹೆಚ್ಚಿನ ಸುಖವಿದೆ. ಸಂಗೀತ ಅಂದರೆ ಅದು ಬರಿ ಹಾಡು ಆಗಿರಬೇಕು ಅಂತೇನಿಲ್ಲ. ಪ್ರತಿಯೊಂದು ಪ್ರಾಣಿ, ಪಕ್ಷಿಗಳಲ್ಲಿ, ವಸ್ತುವಿನಲ್ಲಿ ಸಂಗೀತವಿದೆ ಎಂದು ಮೂಡು ಗಿಳಿಯಾರು ಜನಸೇವಾ ಟ್ರಸ್ಟ್ ಸಂಚಾಲಕ, ಪತ್ರಕರ್ತ ವಸಂತ ಗಿಳಿಯಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಕಲಾಕ್ಷೇತ್ರ ಸಂಸ್ಥೆಯ ಪ್ರಕಾಶಾಂಗಣದಲ್ಲಿವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳಿಗ್ಗೆ ಎದ್ದಾಗ ಹಕ್ಕಿಗಳ ಕೂಗು, ಪ್ರಾಣಿಗಳ ಕೂಗು, ಗಿಡ ಮರಗಳ ಸದ್ದು, ನೀರು ಹರಿಯುವ ಸದ್ದು ಹೀಗೆ ಎಲ್ಲದರಲ್ಲಿಯೂ ಒಂದೊಂದು ರೀತಿಯ ಸಂಗೀತ ಹೊರ ಹೊಮ್ಮುತ್ತದೆ. ಸಂಗೀತ ಮನಸ್ಸಿಗೆ, ದೇಹಕ್ಕೆ ಅಮೂಲ್ಯ ಚೈತನ್ಯ, ನವೋಲ್ಲಾಸ ನೀಡುವ ಸಾಧನವಾಗಿದೆ. ಸಂಗೀತ ಹೇಳುವ ಮತ್ತು ಕೇಳುವ ಹವ್ಯಾಸದಿಂದ ಆರೋಗ್ಯ ಮತ್ತು ಆಯಸ್ಸು ವೃದ್ದಿಯಾಗುವುದರ ಜೊತೆಗೆ ಒಂದು ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕಲಾಕ್ಷೇತ್ರ ಸಂಸ್ಥೆಯ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಸಾಮಾಜಿಕ ಹೋರಾಟಗಾರ ಸೋಮಶೇಖರ ಶೆಟ್ಟಿ ಕೆಂಚನೂರು, ತಾಲ್ಲೂಕು ಯುವಜನಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಉದ್ಯಮಿ ಸನತ್ ಕುಮಾರ್ ರೈ ಇದ್ದರು. ಪ್ರಾಪ್ತಿ ಹೆಗ್ಡೆ ಮತ್ತು ಕಮಲ್ ಕುಂದಾಪುರ ಅವರು ಚಲನಚಿತ್ರ ಗೀತೆಗಳನ್ನು ಹಾಡಿ ನೆರೆದವರನ್ನು ರಂಜಿಸಿದರು.