ಸಂಚಾರಕ್ಕೆ ಮುಕ್ತಗೊಂಡ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆ
ಉಪ್ಪಿನಂಗಡಿ: ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸುಮಾರು ಐದು ತಿಂಗಳುಗಳಿಂದ ಸಂಚಾರ ನಿಷೇಧಿಸಲ್ಪಟ್ಟಿದ್ದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತಗೊಂಡಿತು.
ಎರಡನೇ ಹಂತದಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ. ಉದ್ದ ಮತ್ತು 8.50 ಮೀಟರ್ ಅಗಲದಲ್ಲಿ ಸಿದ್ಧಗೊಂಡಿರುವ ಕಾಂಕ್ರಿಟ್ ರಸ್ತೆಯನ್ನು ಗುಂಡ್ಯ(ಬಾರ್ಡರ್)ದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಡಿ.ರೇವಣ್ಣ, ಯು.ಟಿ.ಖಾದರ್, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ರಾಜೇಶ್ ನಾಯ್ಕ, ಎಚ್.ಕೆ.ಕುಮಾರಸ್ವಾಮಿ, ಹರೀಶ್ ಕುಮಾರ್, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ. ಉದ್ದ ಮತ್ತು 8.50 ಮೀಟರ್ ಅಗಲದ ಕಾಂಕ್ರಿಟ್ ರಸ್ತೆ 2ನೆ ಹಂತದ ಕಾಮಗಾರಿಗೆ 74 ಕೋಟಿ ರೂ. ಮಂಜೂರಾಗಿತ್ತು. ಕಾಮಗಾರಿ ಸಲುವಾಗಿ ಈ ರಸ್ತೆಯಲ್ಲಿ ಜನವರಿ 20ರಿಂದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಕಾಮಗಾರಿ ಸಂಪೂರ್ಣಗೊಂಡಿದ್ದು, ಇಂದಿನಿಂದ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ.