ಸಂಚಾರ ನಿಯಮ ಉಲ್ಲಂಘನೆ: ನಮ್ಮ ಟ್ರಾಫಿಕ್ ವಾಟ್ಸಾಪ್, ಫೇಸ್ ಬುಕ್ ಗೆ ಮಾಹಿತಿ ನೀಡಿ
ಮಂಗಳೂರು : ದ.ಕ. ಜಿಲ್ಲಾ ಪೊಲೀಸ್ ಇಲಾಖೆಯು ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ವಾಗುವಂತೆ “ನಮ್ಮ ಟ್ರಾಫಿಕ್’ ಎಂಬ ವಿನೂತನ ಪ್ರಯೋಗ ಜಾರಿಗೆ ತಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ತಿಳಿಸಿದ್ದಾರೆ.
ವಿನೂತನ ಪ್ರಯೋಗದಂತೆ ಸಾರ್ವಜನಿಕರಿಗೆ ಎಲ್ಲಾದರೂ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ “ನಮ್ಮ ಟ್ರಾಫಿಕ್’ ವಾಟ್ಸ್‌ಆ್ಯಪ್ ಮೊ.ಸಂ.: 9480805300ಗೆ ಅಥವಾ “ನಮ್ಮ ಟ್ರಾಫಿಕ್’ ಫೇಸ್‌ಬುಕ್ ಪೇಜ್‌ಗೆ ವಿವರ ಮತ್ತು ಚಿತ್ರವನ್ನು ಕಳುಹಿಸಬಹುದು.
ಸಾರ್ವಜನಿಕ ರಸ್ತೆಯಲ್ಲಿ ಯಾರಾದರೂ ವಾಹನವನ್ನು ಸಂಚಾರಕ್ಕೆ ಅಡ್ಡಿಯಾಗಿ ನಿಲ್ಲಿಸಿದ್ದರೆ ವಾಹನದ ರ್ಭೀಟೊ ಮತ್ತು ಸ್ಥಳದ ವಿವರ(ಲ್ಯಾಂಡ್ ಮಾರ್ಕ್)ವನ್ನು ನಮ್ಮ ಟ್ರಾಫಿಕ್ ಗೆ ಕಳುಹಿಸಿಕೊಡಬಹುದು ಎಂದು ಎಸ್ಪಿ ತಿಳಿಸಿದರು. ಸಾರ್ವಜನಿಕರು ಕಳುಹಿಸಿದ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಂನಲ್ಲಿ ಸ್ವೀಕರಿಸಿ, ತಕ್ಷಣ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇವೆ. ಸಂಬಂಧಿಸಿದ ಪೊಲೀಸ್ ಠಾಣೆಯವರು ಸ್ಥಳಕ್ಕೆ ತೆರಳಿ ವಾಹನ ಸಂಚಾರಕ್ಕೆ ಅಡ್ಡಿಯಾಗುವ ವಾಹನ ಗಳಿಗೆ ದಂಡ ವಿಧಿಸಿ, ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುತ್ತಾರೆ. ವಾಹನಕ್ಕೆ ದಂಡ ವಿಧಿಸಿದ ವಿವರವನ್ನು ಪೊಲೀಸ್ ಬ್ಲಾಗ್‌ನಲ್ಲಿ ಹಾಕಲಾಗುವುದು. ಈ ವಿನೂತನ ಪ್ರಯೋಗವು ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿರುವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಎಸ್ಪಿ ವಿವರಿಸಿದರು.