ಸಂತೆಕಟ್ಟೆ ರಾ.ಹೆದ್ದಾರಿ 66 ಅಸಮರ್ಪಕ ಕಾಮಗಾರಿ ಸಮಸ್ಯೆ ನಿವಾರಿಸುವಂತೆ ನಾಗರಿಕರ ಹಿತರಕ್ಷಣಾ ವೇದಿಕೆ ಮನವಿ
ಉಡುಪಿ: ಸಂತೆಕಟ್ಟೆ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಸಮರ್ಪಕ ಕಾಮಗಾರಿಯಿಂದ ಜನಸಾಮಾನ್ಯರಿಗೆ ಉಂಟಾಗುವ ಸಮಸ್ಯೆಗಳನ್ನು ನಿವಾರಿಸುವಂತೆ ಆಗ್ರಹಿಸಿ ನಾಗರಿಕರ ಹಿತರಕ್ಷಣಾ ವೇದಿಕೆ ಗೋಪಾಲಪುರ ವಾರ್ಡ್ ಸಂತೆಕಟ್ಟೆ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಅವರಿಗೆ ಮನವಿಯನ್ನು ಸಲ್ಲಿಸಿ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಂತೆಕಟ್ಟೆ ಪ್ರದೇಶವು ಅತ್ಯಂತ ಜನನಿಬಿಡ ಹಾಗೂ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಶಾಲಾ ಕಾಲೇಜು, ಆರಾಧನ ಮಂದಿರಗಳು, ವಸತಿ ಸಮುಚ್ಛಯಗಳು, ಅಂಗಡಿ ಮುಂಗಟ್ಟುಗಳನ್ನು ಹೊಂದಿದ್ದು ಇತ್ತೀಚೆಗೆ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ 66 ರಿಂದ ಸಂತೆಕಟ್ಟೆ ಜಂಕ್ಷನ್ ಬಳಿ ಪ್ರತಿನಿತ್ಯ ನಾಗರಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಲ್ಲದೆ ಪ್ರತಿನಿತ್ಯ ಅಪಘಾತಗಳಿಗೆ ಕಾರಣವಾಗುತ್ತಿದೆ.
ಈ ಪ್ರದೇಶದಲ್ಲಿ ಮಳೆ ನೀರು ಹರಿದು ಹೋಗಲು ನಿರ್ಮಿಸಿದ ಚರಂಡಿ ಹಾಗೂ ಪಾದಾಚಾರಿಗಳಿಗೆ ನಡೆದಾಡಲು ನಿರ್ಮಿಸಿದ ಕಾಲುದಾರಿ ಸಂಪೂರ್ಣ ಕಳಪೆಯಾಗಿದ್ದು, ಕಾಮಗಾರಿಯನ್ನು ಅರ್ಧಬರ್ಧ ಮಾಡಿದ್ದು ನೀರು ಹರಿದು ಹೋಗದೆ ಅಲ್ಲಿಯೇ ನಿಂತು ಸೊಳ್ಳೆ ಉತ್ಪಾದನಾ ತಾಣವಾಗಿದೆ ಅಲ್ಲದೆ ಇದರಿಂದ ಅಕ್ಕಪಕ್ಕದ ಬಾವಿಗಳ ನೀರು ಕೂಡ ಕಲುಶಿತಗೊಂಡಿದೆ. ಚರಂಡಿಗೆ ಹಾಸಲಾದ ಹಾಸುಗಳು ಸಂಪೂರ್ಣ ಕಳಪೆಯಾಗಿದ್ದು ಅಲ್ಲಲ್ಲಿ ತುಂಡಾಗಿ ಬಿದ್ದು ಪಾದಾಚಾರಿಗಳಿಗೆ ಸಮಸ್ಯೆ ಉಂಟಾಗಿದೆ.
ಸಂತೆಕಟ್ಟೆ ಜಂಕ್ಷನ್ ಬಳಿ ಪ್ರತಿನಿತ್ಯ ನೂರಾರು ಬಸ್ಸುಗಳು ನಿಲುಗಡೆಯಾಗುತ್ತಿದ್ದು ಜನರಿಗೆ ಇದುವರೆಗೆ ಯಾವುದೇ ಒಂದು ಬಸ್ ನಿಲ್ದಾಣವನ್ನು ಕೂಡ ನಿರ್ಮಿಸಲಾಗಿಲ್ಲ. ತಂಗುದಾಣವಿಲ್ಲದೆ ಜನರು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಿಂತು ಬಸ್ಸು ಕಾಯುವ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ. ಸಂತೆಕಟ್ಟೆ ಜಂಕ್ಷನ್‍ನಲ್ಲಿ ವಿವಿಧ ಕಡೆಗಳಿಂದ ಬಂದ ಬಸ್ಸು ಹಾಗೂ ಇತರ ವಾಹನಗಳು ಬಂದ ವೇಳೆ ಹಲವಾರು ಅವಘಡಗಳಿಗೆ ಕಾರಣವಾಗುತ್ತಿದೆ. ಜಂಕ್ಷನ್‍ನಲ್ಲಿ ಎರಡು ಕಡೆಯಿಂದ ವೇಗದಲ್ಲಿ ವಾಹನಗಳು ಹೋಗುತ್ತಿರುವುದರಿಂದ ಸ್ಥಳೀಯ ಜನರು ತಮ್ಮ ದೈನಂದಿನ ಬೇಡಿಕೆಗಳಿಗೆ ರಸ್ತೆದಾಟಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಮಾನ್ಯ ಜನರಷ್ಟೇ ಅಲ್ಲದೆ ವಿದ್ಯಾರ್ಥಿಗಳು, ದಿವ್ಯಾಂಗ ವಿಕಲಚೇತನರು, ರಸ್ತೆದಾಟಲು ಸೂಕ್ತವಾದ ಮೇಲ್ಸೇತುವೆಯ ಅಗತ್ಯತೆ ಇದೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದರೂ ಕೂಡ ಹೆದ್ದಾರಿ ಇಲಾಖೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಇನ್ನಾದರೂ ಇಂತಹ ಗಂಭೀರ ಸಮಸ್ಯೆಗಳ ಕುರಿತು ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿದರು.
ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷ ರಿಚ್ಚರ್ಡ್ ರೆಬೆಲ್ಲೊ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಸದಸ್ಯರಾದ ಜಿ.ವಿ. ನಾಯಕ್, ಶೇಖರ್ ನಾಯಕ್ ಹಾಗೂ ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.