ಸಂತೆಕಟ್ಟೆ: ವರಾಹಿ ಶೆಡ್ ನಲ್ಲಿ ಬೆಂಕಿ ಅವಘಡ: ಕಾರ್ಮಿಕರು ಪಾರು
ಉಡುಪಿ: ಸಂತೆಕಟ್ಟೆ ಸಮೀಪದ ಪಕ್ಕಿಬೆಟ್ಟು ರಸ್ತೆಯಲ್ಲಿ ವಾರಾಹಿ ಯೋಜನೆಗೆ ಸಂಬಂಧಿಸಿದ ಶೆಡ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಇದರಿಂದ ಅಪಾರ ಮೌಲ್ಯದ ಸೊತ್ತುಗಳು ಹಾನಿಯಾಗಿವೆ.
ಮಾಹಿತಿಗಳ ಮಂಗಳವಾರ ಸಂಜೆ ವೇಳೆ ಶೆಡ್ ನಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಿಗೆ ಇಡೀ ಶೆಡ್ಗೆ ವಿಸ್ತರಿಸಿದೆ. ಶೆಡ್ ನಲ್ಲಿ ವಾರಾಹಿ ಯೋಜನೆಯ 75ಕ್ಕೂ ಅಧಿಕ ಕಾರ್ಮಿಕರು ಮತ್ತು ಅವರ ಮಕ್ಕಳು ಉಸಿರಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿ ವಾಸವಾಗಿದ್ದು ಸಂಜೆ ವೇಳೆ ಅಲ್ಲಿದ್ದ ಸಿಲಿಂಡರ್ ಸ್ಪೋಟವಾಗಿದೆ ಎನ್ನಲಾಗಿದ್ದು ಇದರಿಂದ ಬೆಂಕಿ ತಗುಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕ್ಷಣಾರ್ಧದಲ್ಲಿ ಬೆಂಕಿ ಸಂಪೂರ್ಣ ಶೆಡ್ ಗೆ ಹರಡಿದ್ದು ಇದರೊಂದಿಗೆ ಪಕ್ಕದಲ್ಲಿಯೇ ರಾಶಿ ಹಾಕಿದ್ದ ವಾರಾಹಿ ಕುಡಿಯುವ ನೀರಿಗೆ ಸಂಬಂದಿಸಿದ ಪೈಪ್ ಹಾಗೂ ಇನ್ನಿತರ ಪರಿಕರಗಳು ಸಂಪೂರ್ಣ ಸುಟ್ಟು ಹೋಗಿವೆ. ಅದರೊಂದಿಗೆ ಕಾರ್ಮಿಕರ ಬಟ್ಟೆಬರೆ ಹಾಗೂ ಇನ್ನಿತರ ದಿನಬಳಕೆಯ ಸಾಮಾಗ್ರಿಗಳೂ ಕೂಡ ಬೆಂಕಿಗೆ ಆಹುತಿಯಾಗಿದೆ.
ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಡಾ| ಜೆರಾಲ್ಡ್ ಪಿಂಟೊ ಬೆಂಕಿ ಅವಘಡ ವಾರಾಹಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದಿದ್ದು ಅದೃಷ್ಟವಶಾತ್ ಶೆಡ್ ನಲ್ಲಿದ್ದ ಮಹಿಳೆ ಹಾಗೂ ಮಕ್ಕಳು ಪಾರಾಗಿದ್ದಾರೆ ಇಲ್ಲವಾದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಟಾಕಿ ದುರಂತದಂತೆಯೇ ಸಜೀವ ದಹನವಾಗುತ್ತಿದ್ದರು. ಅದರೊಂದಿಗೆ ಘಟನೆಯಿಂದ ನನ್ನ ಮನೆ ಸೇರಿದಂತೆ ಸುಮಾರು 10 ಮನೆಗಳಿಗೆ ಕೂಡ ಬೆಂಕಿಯಿಂದ ಅನಾಹುತವಾಗುವ ಸಂಭವಿತ್ತು ಆದರೆ ಕ್ಲಪ್ತ ಸಮಯಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ಬೇರೆಡೆಗೆ ವ್ಯಾಪಿಸದಂತೆ ಮನ್ನೆಚ್ಚರಿಕೆ ವಹಿಸಿದ್ದಾರೆ.
ವಾರಾಹಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದ್ದು 75ಕ್ಕೂ ಅಧಿಕ ಕಾರ್ಮಿಕರನ್ನು ಒಂದೇ ಶೆಡ್ ನಲ್ಲಿ ಕೂಡಿ ಹಾಕಿ ವಾಸ ಮಾಡಲು ವ್ಯವಸ್ಥೆ ಮಾಡಿದ್ದು ಯಾವುದೇ ರೀತಿಯ ಮೂಲಸೌಕರ್ಯಗಳನ್ನು ಕೂಡ ನೀಡಿಲ್ಲ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಕೂಡ ಯಾವುದೇ ರೀತಿಯ ಕ್ರಮ ಜಿಲ್ಲಾಡಳಿತದಿಂದ ನಡೆದಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಘಟನೆ ನಡೆದ ಮಾಹಿತಿ ಇದ್ದರೂ ಸ್ಥಳೀಯ ನಗರಸಭಾ ಸದಸ್ಯರಾಗಲೀ, ಜಿಲ್ಲಾಡಳಿತದ ಅಧಿಕಾರಿಗಳಾಗಲಿ ಕಣ್ಣೆತ್ತಿ ನೋಡಲು ಬರದಿರುವುದು ಜನಸಾಮಾನ್ಯರ ಕುರಿತು ಇರುವ ಕಾಳಜಿಯನ್ನು ಎದ್ದು ತೋರಿಸುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.