ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ
ಮಂಗಳೂರು: ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇದರ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯು 19ನೇ ಜೂನ್ 2018ರಂದು ಮಧ್ಯಾಹ್ನ 3 ಘಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಬಿ.ಎಸ್. ನಾಗೇಂದ್ರ ಪ್ರಕಾಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ಡಯನೀಶಿಯಸ್ ವಾಜ್ ರವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ.ರವರು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಪ್ರೊ. ಬಿ.ಎಸ್. ನಾಗೇಂದ್ರ ಪ್ರಕಾಶ್, ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ಅವರು ಕ್ಯಾಂಪಸ್‍ನಲ್ಲಿ ಹಸಿರಾಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಅದಕ್ಕಾಗಿ ಅವರ ಜೊತೆ ಕೈಜೋಡಿಸಬೇಕೆಂದು ಕೇಳಿದರು. ಬಡ ವಿದ್ಯಾರ್ಥಿಗಳಿಗಾಗಿ ಅಭ್ಯುದಯಕ್ಕಾಗಿ ವಿದ್ಯಾರ್ಥಿಗಳು ಆಯೋಜಿಸಿದ “ಒಂದು ರೂಪಾಯಿ ನಾಣ್ಯದ ಕ್ರಾಂತಿ” ಎಂಬ ಯೋಜನೆಯನ್ನು ಕೊಂಡಾಡಿದರು. ಅಲ್ಲದೆ ಸಂತ ಅಲೋಶಿಯಸ್ ಕ್ಯಾಂಪಸನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕೆಂದು ವಿದ್ಯಾರ್ಥಿಗಳಲ್ಲಿ ವಿನಂತಿಸಿದರು.
ರೆ. ಫಾ. ಡಯನೀಶಿಯಸ್ ವಾಜ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ನಾಯಕತ್ವವು ಆಯ್ಕೆಯನ್ನು ಒಳಗೊಂಡಿದೆ ಮತ್ತು ಆಯ್ಕೆಗಳು ಯೋಜನೆಗಳನ್ನು ಒಳಗೊಂಡಿರುತ್ತದೆ ಎಂದರು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಗುಣಗಳು ಇರಬೇಕು ಮತ್ತು ಅದು ನಾಯಕತ್ವಕ್ಕೆ ಬಹಳ ಅಗತ್ಯವಾದುದು ಎಂದೂ ಅವರು ಹೇಳಿದರು. ಅಲ್ಲದೆ ವಿದ್ಯಾರ್ಥಿಗಳು ಬದಲಾವಣೆಯ ಮಧ್ಯವರ್ತಿಗಳಾಗಿರಬೇಕೆಂದು ತಿಳಿಸಿದರು.
ರೆ. ಫಾ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ.ರವರು ವಿದ್ಯಾರ್ಥಿಗಳ “ಒಂದು ರೂಪಾಯಿ ನಾಣ್ಯದ ಕ್ರಾಂತಿ” ಎಂಬ ಹೊಸ ಯೋಜನೆಯನ್ನು ಉತ್ತೇಜಿಸುತ್ತಾ ಶ್ಲಾಘಿಸಿದರು. ಅಲ್ಲದೆ ಅವರು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ವಿಶೇಷ ಜವಾಬ್ದಾರಿಯೊಂದಿಗೆ ರೂಪಿಸಿಕೊಳ್ಳಬೇಕೆಂದು ಹೇಳಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಿದರು.
2018-19ನೇ ಸಾಲಿನ ಚುನಾಯಿತ ವಿದ್ಯಾರ್ಥಿ ಸಂಘದ ನಾಯಕ -ನಾಯಕಿಯರ ಹೆಸರುಗಳು ಈ ಕೆಳಗಿನಂತಿವೆ:
ರೆಲ್‍ಸ್ಟನ್ ಸ್ಟುವರ್ಟ್ ಲೋಬೊ, ತೃತೀಯ ಬಿ.ಕಾಂ. – ವಿದ್ಯಾರ್ಥಿ ಸಂಘದ ಅಧ್ಯಕ್ಷ
ಜಿನಿ ಶರ್ಲಿ ಸಾಜಿ, ತೃತೀಯ ಬಿ.ಎ. – ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ
ರೂಪಲ್ ಡಿಸೋಜ, ದ್ವಿತೀಯ ಬಿ.ಎಸ್ಸಿ. – ವಿದ್ಯಾರ್ಥಿ ಸಂಘದ ಕಾರ್ಯದರ್ಶಿ
ಲೋಯ್ಡ್ ವಿನೀತ್ ಸಿಕ್ವೇರಾ, ದ್ವಿತೀಯ ಬಿ.ಎಸ್ಸಿ. – ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ
ರೋಶನ್ ಸಂತೋಷ್, ತೃತೀಯ ಬಿಬಿಎ, ಸ್ಪೀಕರ್
ಅಬ್ದುಲ್ಲಾ ನಂಗರತ್, ದ್ವಿತೀಯ, ಉಪಸ್ಪೀಕರ್
ಈ ಕಾರ್ಯಕ್ರಮದಲ್ಲಿ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಮೂಸಾ ಫಾಝಿಲ್‍ನನ್ನು ಸನ್ಮಾನಿಸಲಾಯಿತು. ಗ್ರಾಫಿಕ್ ಡಿಸೈನ್ ಪರಿಣತರಾಗಿರುವ ಫಾಝಿಲ್ ತಮ್ಮದೇ ಸಂಸ್ಥೆಯಾದ ಫಾಝಿಲ್ ಕ್ರಿಯೇಶನ್ಸ್ನ ಸಿಇಒ ಆಗಿದ್ದು, ಭಾರತದ ಅತ್ಯಂತ ಕಿರಿಯ ಉದ್ಯಮಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಲವಾರು ಸಂಘ-ಸಂಸ್ಥೆಗಳ ಪ್ರಶಸ್ತಿಗಳಿಗೆ ಪಾತ್ರರಾದ ಇವರು ಗೂಗಲ್‍ನ ಆನ್‍ಲೈನ್ ಮಾರ್ಕೆಟಿಂಗ್ ಫಂಡಮೆಂಟಲ್ಸ್ ಕ್ವಾಲಿಫಿಕೇಶನ್ ಸರ್ಟಿಫಿಕೇಟ್ ಮತ್ತು ಫೇಸ್‍ಬುಕ್ ಸರ್ಟಿಫಿಕೇಟ್ ಪಡೆದಿದ್ದಾರೆ. ಅವರು ಗೂಗಲ್‍ನ 106 ಪಾಠಗಳು ಮತ್ತು 26 ಗೂಗಲ್ ಡಿಜಿಟಲ್ ಬ್ಯಾಜ್‍ಗಳನ್ನು ತೆರೆದಿದ್ದಾರೆ. ಈ ಕೋರ್ಸಿನಲ್ಲಿ 23 ಮೊಡ್ಯೂಲ್‍ಗಳಿದ್ದು, ಮಾರ್ಕೆಟಿಂಗ್ ಫಂಡಮೆಂಟಲ್ಸ್‍ನ ಇ-ಮೇಲ್, ಸೋಶಿಯಲ್ ಮೀಡಿಯ, ಡಿಸ್ಪ್ಲೇ, ವೀಡಿಯೋ, ಇ-ಕಾಮರ್ಸ್, ಜಿಯೊ-ಟಾರ್ಗೆಟಿಂಗ್ ಮತ್ತು ಎನಾಲಿಸಿಸ್ ಎಂಬ ವಿಷಯಗಳನ್ನೊಳಗೊಂಡಿದೆ.
ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಡಾ. ರತನ್ ಮೊಹಂತರವರು ಅತಿಥಿಗಳನ್ನು ಸ್ವಾಗತಿಸಿದರು., ಉಪನಿರ್ದೇಶಕರಾದ ಡಾ. ಸಂತೋಷ್ ಗೋವಿಯಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಸೆಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ರೆಲ್‍ಸ್ಟನ್ ಲೋಬೊ ವಂದನಾರ್ಪಣೆಗೈದರು.