ಸಂತ ಅಲೋಶಿಯಸ್ ಕಾಲೇಜು ರೋಡ್ ವಿವಾದ- ಆಡಳಿತ ಮಂಡಳಿ ಸ್ಪಷ್ಟನೆ
ಮಂಗಳೂರು : ಸದ್ರಿ ರಸ್ತೆ ವಿವಾದ ಈಗ ರಾಜ್ಯ ಉಚ್ಛ ನ್ಯಾಯಾಲಯದ ಎದುರು ವಿಚಾರಣಾ ಹಂತದಲ್ಲಿದೆ. ವಿಜಯಾ ಬ್ಯಾಂಕ್ ನೌಕರರ ಸಂಘ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯದ ಏಕ ಸದಸ್ಯ ಪೀಠ ವಜಾ ಮಾಡಿತ್ತು. ಆ ತೀರ್ಪಿನ ವಿರುದ್ಧ ವಿಜಯಾ ಬ್ಯಾಂಕ್ ನೌಕರರ ಸಂಘ ರಿಟ್ ಮನವಿಯನ್ನು ಸಲ್ಲಿಸಿದಾಗ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿ ನ್ಯಾಯಾಲಯದ ಅಂತಿಮ ಆದೇಶದ ವರೆಗೆ ಮೇ 24, 2017 ರಂತೆ ಯಥಾ ಸ್ಥಿತಿಯನ್ನು ಕಾಪಾಡುವಂತೆ ಆದೇಶಿಸಿದೆ. ಈ ಆದೇಶವನ್ನೇ ತಪ್ಪು ಗ್ರಹಿಕೆಯಿಂದ ತಮಗೆ ಸಿಕ್ಕ ಜಯವೆಂದು ಪ್ರಚಾರಮಾಡಲಾಗುತ್ತಿದೆ. ಸಂತ ಅಲೋಶಿಯಸ್ ಕಾಲೇಜು ಈ ವಿವಾದದಲ್ಲಿ ಮಧ್ಯ ಪ್ರವೇಶ ಮಾಡಲು ಅವಕಾಶ ನೀಡುವಂತೆ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ರಿಟ್ ಮನವಿ ಸಲ್ಲಿಸಿದೆ. ನ್ಯಾಯಾಲಯದ ಆದೇಶದ ಪ್ರಕಾರ ಯಾವುದೇ ಸಂಘಟನೆ ಸದ್ರಿ ರಸ್ತೆಗೆ ನಾಮಫಲಕ ಹಾಕುವುದು, ಉದ್ಘಾಟನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮುಂತಾದ ಯಾವುದೇ ಕ್ರಮ ಕೈಗೊಳ್ಳುವುಂತಿಲ್ಲ. ಮಂಗಳೂರು ಮಹಾನಗರ ಪಾಲಿಕೆ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡುವುಂತಿಲ್ಲ. ವಿಜಯಾ ಬ್ಯಾಂಕ್ ನೌಕರರ ಸಂಘಟಣೆ ಹಾಗೂ ಮಂಗಳೂರು ಮಹಾನಗರಪಾಲಿಕೆಗೆ ಈ ಬಗ್ಗೆ ಕಾಲೇಜಿನಿಂದ ನೋಟೀಸ್ ನೀಡಲಾಗಿದೆ.
ಆದಾಗ್ಯೂ ಕೆಲವು ರಾಜಕೀಯ ವ್ಯಕ್ತಿಗಳು ಸದ್ರಿ ರಸ್ತೆಗೆ ನೂತನ ಸರಕಾರ ಅಧಿಕಾರ ವಹಿಸಿಕೊಂಡ ಒಂದು ತಿಂಗಳಿನೊಳಗಾಗಿ ಮರು ನಾಮಕರಣ ಮಾಡಲಾಗುವುದು, ಇತ್ಯಾದಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವೆಲ್ಲಾ ಕೇವಲ ಚುನಾವಣಾ ಗಿಮಿಕ್ ಗಳಾಗಿವೆ. ಉಚ್ಛ ನ್ಯಾಯಾಲಯದಲ್ಲಿ ವಿಚಾರಣಾಧೀನ ವಿಷಯಗಳ ಬಗ್ಗೆ ರಾಜಕೀಯ ಹೇಳಿಕೆಗಳನ್ನು ನೀಡುವುದು ನ್ಯಾಯಾಲಯದ ನಿಂದನೆಯಾಗಿರುತ್ತದೆ. ನ್ಯಾಯಾಂಗ ಪ್ರಕ್ರಿಯೆ ಮುಗಿಯುವವರೆಗೆ ಸದ್ರಿ ವಿಷಯದ ಬಗ್ಗೆ ಪ್ರಚೋದನಾತ್ಮಕ, ಅನಪೇಕ್ಷಿತ ಹೇಳಿಕೆಗಳನ್ನು ನೀಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಉಚ್ಛನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.