ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಸಂಭ್ರಮದ ಆಚರಣೆ
ಮಂಗಳೂರು: ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರಿನ ಧರ್ಮಾಧ್ಯಕ್ಷರು ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಸಂಭ್ರಮದ ಆಚರಣೆಯನ್ನು ನೆರವೇರಿಸಿದರು. ಸಂತ ಆಂತೋನಿಯವರ ಕೋರಿಕೆಯ ಮುಖಾಂತರ ದೇವರು ಭಕ್ತಾಧಿಗಳಿಗೆ ಧಾರಾಳ ಆಶೀರ್ವಾದ ನೀಡಿದ್ದಾರೆ. ಈ ಸಂಭ್ರಮದ ಆಚರಣೆ ದೇವರು ನೀಡಿದ ಆಪಾರ ಆಶೀರ್ವಾದಗಳಿಗೆ ಉಪಕಾರ ಸ್ಮರಣೆಯಾಗಿದೆ ಎಂದರು.
ಬಂಟ್ವಾಳ ಬಾಲಕ ಯೇಸು ಸ್ವಾಮಿಯ ದೇವಾಲಯದ ಧರ್ಮಗುರು ವಂ. ಫಾ. ಮ್ಯಾಕ್ಷಿಮ್ ನೊರೊನ್ಹಾರವರು ಪ್ರವಚನ ನೀಡಿದರು. ತಮ್ಮ ಪ್ರವಚನದಲ್ಲಿ, ನಾಲಗೆ ದೇವರು ಕೊಟ್ಟಿರುವಂತಹ ದೊಡ್ಡ ವರ. ಈ ನಾಲಗೆಯಿಂದ ನಾವು ಇತರರಿಗೆ ನೋವು ಉಂಟು ಮಾಡಬಹುದು, ಇತರರ ಹೆಸರಿಗೆ ಕಳಂಕ ತರಬಹುದು, ನಷ್ಟ ಉಂಟು ಮಾಡಬಹುದು. ಅದೇ ರೀತಿ ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ನೊಂದ ಮನಗಳಿಗೆ ಜೀವ ತುಂಬ ಬಹುದು, ಸ್ಪೂರ್ತಿ ನೀಡಬಹುದು. ದೇವರು ನಮಗೆ ನೀಡಿದ ನಾಲಗೆಯಿಂದ ಆದಷ್ಟು ಒಳಿತನ್ನು ಮಾಡಲು ಪ್ರಯತ್ನ ಮಾಡೋಣ ಎಂದರು. ಹೀಗೆ ಮಾಡಿದಲ್ಲಿ ನಾವು ಸಂತ ಆಂತೋನಿಯವರು ಪುಣ್ಯ ಸ್ಮರಣಿಕೆಗಳ(ಜೀವಂತ ನಾಲಗೆ) ಹಬ್ಬವನ್ನು ನಿಜ ರೀತಿಯಲ್ಲಿ ಆಚರಿಸಿದಂತಾಗುವುದು ಎಂದರು.
ಸಾಯಾಂಕಾಲ 4.30 ಗಂಟೆಗೆ ಮಿಲಾಗ್ರಿಸ್ ದೇವಾಲಯದಲಿ ಕಲ್ಲಿಕೋಟೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ. ಡಾ. ವರ್ಗೀಸ್ ಚಕ್ಕಲಕಲ್ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ಅರ್ಪಿಸಿದರು. ಬೆಳಗ್ಗೆ 8.15 ಗಂಟೆಗೆ ವಂ. ಡಾ. ಪಿಯುಸ್ ಡಿ’ಸೋಜ (ಓ. ಸಿ. ಡಿ.) ಹಿರಿಯ ಭಕ್ತಾಧಿಗಳಿಗಾಗಿ ಬಲಿಪೂಜೆ ಅರ್ಪಿಸಿದರು. 11 ಗಂಟೆಗೆ ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳು ಆಶ್ರಮದ ನಿವಾಸಿಗಳಿಗೆ ಮತ್ತು ವಿಶೇಷ ಆಹ್ವಾನಿತರಿಗೆ ಬಲಿ ಪೂಜೆ ಅರ್ಪಿಸಿದರು.
ಹಬ್ಬದ ಆಚರಣೆಯಲ್ಲಿ 35 ಧರ್ಮಗುರುಗಳು ಮತ್ತು 4,000 ಕ್ಕಿಂತ ಮೇಲ್ಪಟ್ಟು ಭಕ್ತಾಧಿಗಳು ಪಾಲ್ಗೊಂಡರು.