ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ಸಂಭ್ರಮದ ತಯಾರಿ
ಮಂಗಳೂರು: ಜೂನ್ 13ನೇ ತಾರೀಕಿನಂದು ನಡೆಯಲಿರುವ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ಜೆಪ್ಪು ಸಂತ ಆಂತೋನಿ ಆಶ್ರಮ ವತಿಯಿಂದ ಸಂಭ್ರಮದ ತಯಾರಿ ನಡೆಯಲಾಗುತ್ತಿದೆ. ತ್ರೆದೇಸಿನ(13 ದಿನಗಳ ನವೇನ ಪ್ರಾರ್ಥನೆ) ಮೇ 31ನೇ ತಾರೀಕಿನಂದು ಆರಂಭಗೊಂಡಿದ್ದು ಜೂನ್ 12 ತನಕ ಈ ಪ್ರಾರ್ಥನೆ ನಡೆಯಲಿದೆ. ಜೆಪ್ಪು ಆಶ್ರಮದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಈ ಬಲಿಪೂಜೆಯಲ್ಲಿ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಹಬ್ಬಕ್ಕೆ ಸಮೀಪದ ತಯಾರಿಯಾಗಿ ತ್ರಿದುವುಮ್(ಮೂರು ದಿನಗಳ) ನವೇನ ಪ್ರಾರ್ಥನೆ ಜೂನ್ ತಿಂಗಳ 10, 11 ಮತ್ತು 12 ನೇ ತಾರೀಕಿನಂದು ನಡೆಯಲಿದೆ. ಸಾಯಾಂಕಾಲ 6 ಗಂಟೆಗೆ ಬಲಿ ಪೂಜೆ ಮತ್ತು ನವೇನ ಪ್ರಾರ್ಥನೆ ಮಿಲಾಗ್ರಿಸ್ ಚರ್ಚ್ನಲ್ಲಿ ನಡೆಯಲಿದೆ. ಮೂಲ್ಕಿ ಡಿವೈನ್ ಕೇಂದ್ರದ ಫಾ. ಅನಿಲ್ ಕಿರನ್ ಫೆರ್ನಾಂಡಿಸ್ ಈ ಭಕ್ತಿ ಕಾರ್ಯಕ್ರಮವನ್ನು ನಡೆಸಿ ಕೊಡುವರು.
ಹಬ್ಬದ ದಿವಸ ಸಾಯಾಂಕಾಲ 6 ಗಂಟೆಗೆ ಅ. ವಂ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜ ರವರು ನಗರದ ಮತ್ತು ಸಮೀಪದ ಧರ್ಮಗುರುಗಳ ಜೊತೆ ಸಂಭ್ರಮದ ಬಲಿಪೂಜೆಯನ್ನು ಅರ್ಪಿಸಲಿರುವರು. ಬೆಳಿಗ್ಗೆ 8.15 ಗಂಟೆಗೆ ಪ್ರಾಯಸ್ತರಿಗೆ ಮತ್ತು ಅಸ್ವಸ್ಥರಿಗೆ ಒಂದು ಬಲಿ ಪೂಜೆ ಇರುವುದು ಹಾಗೂ ಅವರಿಗೋಸ್ಕರ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಸಾಯಾಂಕಾಲ 4 ಗಂಟೆಗೆ ಮಲಯಾಳಂ ಭಾಷೆಯಲ್ಲಿ ಕೇರಳದ ತ್ರಿಸುರ್ನ ಫಾ. ಜೆಸ್ಟಿನ್ ಜೇಮ್ಸ್ ಬಲಿಪೂಜೆಯನ್ನು ಅರ್ಪಿಸುವರು. ಬೆಳಗ್ಗೆ 11 ಗಂಟೆಗೆ ಜೆಪ್ಪು ಆಶ್ರಮದಲ್ಲಿ ಮೊ. ಡೆನಿಸ್ ಮೊರಾಸ್ ಪ್ರಭುರವರು ಆಶ್ರಮದ ನಿವಾಸಿಗಳಿಗೆ ಹಾಗೂ ವಿಶೇಷ ಆಹ್ವಾನಿತರಿಗೆ ಒಂದು ಬಲಿಪೂಜೆಯನ್ನು ಅರ್ಪಿಸುವರು.
ಮಂಗಳೂರಿನಲ್ಲಿ ದಿ. ಮೊ. ಎಂ. ಪಿ. ಕುಲಾಸೊರವರು ಸಂತ ಆಂತೋನಿಯವರ ವ್ಯವಸ್ಥಿತ ಭಕ್ತಿ ಆರಂಭ ಮಾಡಿ ಜೂನ್ ತಿಂಗಳ 12ನೇ ತಾರೀಕಿನಂದು 119 ವರ್ಷಗಳು ಸಂದಿ 120 ನೇ ವರ್ಷ ಆರಂಭಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಂತ ಆಂತೋನಿ ಆಶ್ರಮ ವತಿಯಿಂದ ವಾರ್ಷಿಕ ಯೋಜನೆಯನ್ನು ತಯಾರಿಸಲಾಗಿದೆ. ಈ ಯೋಜನೆಯ ವಿವರವುಳ್ಳ ಹಸ್ತಪತ್ರವನ್ನು ಹಬ್ಬದ ಸಂಭ್ರಮದ ಬಲಿಪೂಜೆಯ ನಂತರ ಧರ್ಮಾಧ್ಯಕ್ಷರು ಬಿಡುಗಡೆ ಮಾಡಲಿದ್ದಾರೆ.