ಸಂಸದನಾದರೆ ಸರ್ವ ಸಮುದಾಯದ ಶಾಂತಿಯುತ ಬದುಕಿಗೆ ವಾತಾವರಣ ನಿರ್ಮಾಣ ನನ್ನ ಗುರಿ – ಪ್ರಮೋದ್
ಉಡುಪಿ: ನಾನು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸಿಕೊಂಡು ಬಂದಿದ್ದೇನೆ ನನಗೆ ಸದಾ ಜಿಲ್ಲೆಯಲ್ಲಿ ಎಲ್ಲಾ ಸಮುದಾಯದವರು ಶಾಂತಿಯಿಂದ ಬಾಳಬೇಕು ಎಂದು ಬಯಸುತ್ತೇನೆ. ಶಾಂತಿಯುತ ಸಮಾಜಕ್ಕಾಗಿ ಈ ಬಾರಿ ತನ್ನನ್ನು ಬೆಂಬಲಿಸಿ ಎಂದು ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಶನಿವಾರ ಉಡುಪಿಯ ಮಥುರ ಕಂಫರ್ಟ್ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದ ನಾಯಕರುಗಳ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು
ನಾನು ಉಡುಪಿಯ ಶಾಸಕನಾಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸಿದ್ದು ಈ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ಕೋಮು ಸಂಘರ್ಷದಂತ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೆ. ನೆರೆಯ ಜಿಲ್ಲೆಯಲ್ಲಿ ಹಲವಾರು ರೀತಿಯ ಕೋಮು ಘರ್ಷಣೆಗಳೂ ನಡೆದರೂ ಕೂಡ ಅದು ಉಡುಪಿ ಜಿಲ್ಲೆಯ ಗಡಿ ದಾಟದಂತೆ ಪೊಲೀಸ್ ಅದಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೆ. ಈ ಜಿಲ್ಲೆಯ ಜನರು ಸದಾ ಶಾಂತಿ ಪ್ರೀಯರು ಹಾಗೂ ಶಾಂತಿಯನ್ನೇ ಬಯಸುವವರು. ತಾನು ಸಂಸದನಾಗಿ ಆಯ್ಕೆಯಾದರೆ ಲೋಕಸಭಾ ಕ್ಷೇತ್ರದ ಎಲ್ಲಾ ಸಮುದಾಯದ ಜನರಿಗೆ ಶಾಂತಿಯುತ ಬದುಕು ಸಾಗಿಸುವ ವಾತಾವರಣ ನಿರ್ಮಾಣ ಮಾಡಲು ಶ್ರಮಿಸುತ್ತೇನೆ ಎಂದರು.
“ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಶಾಸಕರಾಗಿ ಚುನಾಯಿತರಾದರೆ, ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸಲು ಅವಕಾಶ ಸಿಗುತ್ತಿರಲಿಲ್ಲ. ಎರಡು ಜಿಲ್ಲೆಯ ಜನರು ನನ್ನನ್ನು ಸಂಸತ್ ಸದಸ್ಯರಾಗಿ ಚುನಾಯಿಸಲಿದ್ದಾರೆ ಎಂಬ ನಂಬಿಕೆ ನನ್ನದು. ನಾನು ಗೆದ್ದರೆ, ನಾನು ನನ್ನ ಕರ್ತವ್ಯವನ್ನು ಉತ್ತಮ ನಂಬಿಕೆಯಿಂದ ಮಾಡುತ್ತೇನೆ “ಎಂದು ಅವರು ಭರವಸೆ ನೀಡಿದರು.
ಏಪ್ರಿಲ್ 18 ರಂದು ಕ್ರೈಸ್ತ ಸಮುದಾಯ ಪವಿತ್ರ ಗುರುವಾರವನ್ನು ಆಚರಿಸುತ್ತಿದ್ದು ಇಡೀ ದಿನ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುವ ದಿನವಾಗಿದೆ ಆದರೂ ಅದರ ಜೊತೆಯಲ್ಲಿ ತಪ್ಪದೆ ಮತದಾನ ಮಾಡುವುದರೊಂದಿಗೆ ಸಂವಿಧಾನತ್ಮಕ ಹಕ್ಕನ್ನು ಚಲಾಯಿಸಬೇಕು ಎಂದರು.
ಮುಖ್ಯಮಂತ್ರಿಗಳ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ ಅವರು ಕ್ರೈಸ್ತ ಸಮುದಾಯಕ್ಕೆ ಸರಕಾರದಿಂದ ಸಿಗುತ್ತಿರುವ ವಿವಿಧ ಯೋಜನೆಗಳನ್ನು ಪಡೆಯುವಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ನಾಯಕರೊಂದಿಗೆ ಸಮಾಲೋಚನೆ ನಡೆಸಿದರು.
ಕ್ರಿಶ್ಚಿಯನ್ ಸಮುದಾಯ ನಾಯಕರುಗಳಾದ ರೊನಾಲ್ಡ್ ಕರ್ಕಡಾ, ವಿಲ್ಸನ್ ರಾಡ್ರಿಗಸ್, ಮೈಕೆಲ್ ರಮೇಶ್ ಡಿಸೋಜಾ, ಜಾನೆಟ್ ಬಾರ್ಬೋಜಾ, ಆಗ್ನೆಸ್ ಡೆಸಾ, ಡಾ. ನೇರಿ ಕಾರ್ನೆಲಿಯೊ, ಜೆರಾಲ್ಡ್ ಕ್ರಾಸ್ತಾ, ಮೆಲ್ವಿನ್ ಡಿ’ಸೋಜಾ, ಕ್ರಿಸ್ಟೆನ್ ಡಿ ‘ಅಲ್ಮೇಡಾ, ಜಿತೇಂದ್ರ ಫರ್ತಾಡೊ, ಪ್ರಶಾಂತ್ ಜತ್ತನ್ನ, ಲೂಯಿಸ್ ಲೋಬೋ, ಡಿಯೋನ್ ಡಿಸೋಜಾ ಮತ್ತು ಇತರರು ಉಪಸ್ಥಿತರಿದ್ದರು.
ಕ್ರಿಶ್ಚಿಯನ್ ಸಮುದಾಯದ ಯುವ ನಾಯಕ ಸ್ಟೀವನ್ ಕುಲಾಸೊ ಕಾರ್ಯಕ್ರಮ ಸಂಯೋಜಸಿದರು.