ಸಂಸದ ನಳಿನ್ ನಿವಾಸಕ್ಕೆ ಮುತ್ತಿಗೆ ಯತ್ನ; ಎನ್.ಎಸ್.ಯು.ಐ. ಕಾರ್ಯಕರ್ತರು ವಶಕ್ಕೆ
ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲೆಗೆ ಸಮರ್ಪಕ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಎನ್.ಎಸ್.ಯು.ಐ. ಕಾರ್ಯಕರ್ತರು ಸಂಸದರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಗುರುವಾರ ನಡೆಯಿತು.
ಎನ್.ಎಸ್.ಯು.ಐ. ಜಿಲ್ಲಾ ಅಧ್ಯಕ್ಷ ಸುಹಾನ್ ಆಳ್ವ ನೇತೃತ್ವದಲ್ಲಿ ಕಾರ್ಯಕರ್ತರು ಉರ್ವಾ ಬಳಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ಸಂದರ್ಭ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು.
ಬಿಜೆಪಿಗೆ ಧಿಕ್ಕಾರ ಕೂಗುತ್ತಾ ಸಂಸದರ ಮನೆಯೆದುರು ಜಮಾಯಿಸಿದ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್ ಗಳನ್ನು ಬಳಸಿ ತಡೆದರು.
ಈ ಸಂದರ್ಭ ಮಾತನಾಡಿದ ಸುಹಾನ್ ಆಳ್ವ, ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಶಾಲಾ ಕಾಲೇಜುಗಳಿದ್ದರೂ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ತಾರಮತ್ಯ ಮಾಡಲಾಗುತ್ತಿದೆ. ನಮ್ಮ ತೆರಿಗೆ ಹಣ ನಮಗೆ ನೀಡಲು ನಿರಾಕರಿಸಲಾಗುತ್ತಿದೆ. ಜಿಲ್ಲೆಗೆ ಸಂಸದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಮುತ್ತಿಗೆ ಯತ್ನ ನಡೆಸಿದ ವೇಳೆ ಅಲ್ಲಿದ್ದ ಉರ್ವಾ ಠಾಣಾಧಿಕಾರಿ ಭಾರತಿ ತಡೆದಾಗ ಎನ್.ಎಸ್.ಯು.ಐ. ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಬ್ಯಾರಿಕೇಡ್ ತಳ್ಳಿ ಮುತ್ತಿಗೆಗೆ ಮುಂದಾದಾಗ ಪೊಲೀಸರು ಎನ್.ಎಸ್.ಯು.ಐ. ಕಾರ್ಯಕರ್ತರನ್ನು ವಶಕ್ಕೆ ಪಡೆದರು.