ಸಂಸದ ನಳಿನ್ ಹಾಗೂ ಶಾಸಕ ಕಾಮತ್ ಪ್ರಯತ್ನದ ಫಲವಾಗಿ ಲೇಡಿಗೋಶನ್ ಆಸ್ಪತ್ರೆಗೆ 5.7 ಕೋಟಿ ಮಂಜೂರು

Spread the love

ಸಂಸದ ನಳಿನ್ ಹಾಗೂ ಶಾಸಕ ಕಾಮತ್ ಪ್ರಯತ್ನದ ಫಲವಾಗಿ ಲೇಡಿಗೋಶನ್ ಆಸ್ಪತ್ರೆಗೆ 5.7 ಕೋಟಿ ಮಂಜೂರು

ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಎಂಆರ್ ಪಿಎಲ್-ಒಎನ್ ಜಿಸಿ ಕಂಪೆನಿಗೆ ಲಿಖಿತವಾಗಿ ಮನವಿ ಮಾಡಿ ಆ ಬಗ್ಗೆ ಸತತ ಪ್ರಯತ್ನ ಮಾಡಿದ್ದರ ಫಲವಾಗಿ ಮಂಗಳೂರಿನ ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಹೆಚ್ಚುವರಿ ಆರ್ಥಿಕ ಸಹಾಯ ಸಿಕ್ಕಿದೆ.

ಎಂಆರ್ ಪಿಎಲ್- ಒನ್ ಜಿಸಿ ಕಂಪೆನಿಯು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ತನ್ನ ಸಾಮಾಜಿಕ ಬದ್ಧತಾ ನಿಧಿಯ ಅಡಿಯಲ್ಲಿ ಹಣ ನೀಡಿತ್ತು. ಆ ಮೂಲಕ ಲೇಡಿಗೋಶನ್ ಆಸ್ಪತ್ರೆಯ ಹೊಸ ಕಟ್ಟಡದ ನಿರ್ಮಾಣವಾಗಿದೆ. ಆದರೆ ಅಲ್ಲಿ ಮೂಲಭೂತ ಅಗತ್ಯಗಳಾದ ಯಂತ್ರೋಪಕರಣಗಳು ಮತ್ತು ಪೀಠೋಪಕರಣಗಳ ಖರೀದಿಗೆ ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಇತ್ತು. ಅದರಿಂದ ವೈದ್ಯಾಧಿಕಾರಿಗಳು ಮತ್ತು ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ವೇದವ್ಯಾಸ ಕಾಮತ್ ಅವರು ಶಾಸಕರಾಗಿ ಆಯ್ಕೆಯಾದ ತಕ್ಷಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಆಗಬೇಕಾದ ಕಾರ್ಯಗಳ ಬಗ್ಗೆ ಆದ್ಯತೆಯಲ್ಲಿ ಕ್ರಮ ಕೈಗೊಂಡರು. ಎಂಆರ್ ಪಿಎಲ್-ಒಎನ್ ಜಿಸಿಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ, ಮಂಗಳೂರು ಮಾತ್ರವಲ್ಲ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಬಡ, ಮಧ್ಯಮ ವರ್ಗದ ಮಹಿಳೆಯರ ಆಶಾಕಿರಣವಾಗಿರುವ ಲೇಡಿಗೋಶನ್ ಸರಕಾರಿ ಹೆರಿಗೆ ಆಸ್ಪತ್ರೆಗೆ ಅಗತ್ಯವಿರುವ ಯಂತ್ರೋಪಕರಣಗಳು ಮತ್ತು ಪೀಠೋಪಕರಣಗಳಿಗಾಗಿ ಬೇಕಾಗಿರುವ ಹಣದ ಅವಶ್ಯಕತೆಯನ್ನು ಮನಗಾಣಿಸಿದರು. ಅದರಂತೆ ಸಂಸದ ಹಾಗೂ ಶಾಸಕರ ಬೇಡಿಕೆಯನ್ನು ಸ್ವೀಕರಿಸಿದ ಕಂಪೆನಿ 5.7 ಕೋಟಿ ರೂಪಾಯಿಯನ್ನು ಮಂಜೂರು ಮಾಡಿದೆ. ಈ ಹಣ ಮುಂದಿನ ದಿನಗಳಲ್ಲಿ ಲೇಡಿಗೋಶನ್ ಆಸ್ಪತ್ರೆಯ ಸರ್ವಾಂಗಿಣ ಅಭಿವೃದ್ಧಿಗೆ ಸಹಾಯವಾಗಲಿದೆ.

(ಬಾಕ್ಸಿನಲ್ಲಿ) ಈ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು ಲೇಡಿಗೋಶನ್ ಆಸ್ಪತ್ರೆ ಮುಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದ ಮಹಿಳೆಯರಿಗೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆಯಿಲ್ಲದಂತೆ ಸೇವೆ ಸಲ್ಲಿಸಲು ಕೆಲವು ತೊಂದರೆ ಇತ್ತು. ಅದನ್ನು ನಿವಾರಿಸುವುದಕ್ಕಾಗಿ ಎಂಆರ್ ಪಿಎಲ್-ಒನ್ ಜಿಸಿ ಅಧಿಕಾರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ನಾನು ಪ್ರಯತ್ನಿಸಿದ ಕಾರಣದಿಂದ ಈಗ ಫಲ ಸಿಕ್ಕಿದೆ. ಅವರು ನಮ್ಮ ಮನವಿಯನ್ನು ಪರಿಗಣಿಸಿ 5.7 ಕೋಟಿ ರೂಪಾಯಿಯನ್ನು ಲೇಡಿಗೋಶನ್ ಆಸ್ಪತ್ರೆಗೆ ನೀಡಿದ್ದಕ್ಕೆ ಸಂಸದರ ಪರವಾಗಿ ಹಾಗೂ ಶಾಸಕನ ನೆಲೆಯಲ್ಲಿ ಮತ್ತು ಬಡಜನರ ಪರವಾಗಿ ಅನಂತ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.


Spread the love