ಸಂಸದ ನಳಿನ್ ಹೆಸರು ದುರುದ್ದೇಶಕ್ಕೆ ಕಾಂಗ್ರೆಸ್ ಬಳಕೆ- ಶಾಸಕ ಕಾಮತ್
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲು ಅವರು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರವನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರಾಗಲೀ, ಬಿಜೆಪಿಯ ಯಾವುದೇ ಮುಖಂಡರಾಗಲೀ ಅಸ್ಥಿರಗೊಳಿಸಲು ಹೋಗುವುದಿಲ್ಲ. ಅಂತಹ ಅವಶ್ಯಕತೆ ಕೂಡ ನಮಗಿಲ್ಲ. ಸರಕಾರದ ಒಳಗೆ ಕಾಂಗ್ರೆಸ್, ಜೆಡಿಎಸ್ ನಡೆಸುತ್ತಿರುವ ಜಂಗಿ ಕುಸ್ತಿಯಿಂದಲೇ ಸರಕಾರ ಬಿದ್ದು ಹೋಗಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಮರಿಚೀಕೆಯಾಗಿದೆ. ಅಭಿವೃದ್ಧಿಗೆ ಅನುದಾನ ಜೆಡಿಎಸ್ ಕ್ಷೇತ್ರಗಳಿಗೆ ಮಾತ್ರ ಸಿಗುತ್ತಿದೆ ಎಂದು ಕಾಂಗ್ರೆಸ್ ಶಾಸಕರೇ ಅವಲತ್ತುಕೊಂಡಿದ್ದಾರೆ. ಹಾಗಿರುವಾಗ ಅದನ್ನು ಸರಿ ಮಾಡುವುದು ಬಿಟ್ಟು ಬಿಜೆಪಿಯ ಮೇಲೆ ಗೂಬೆ ಕೂರಿಸುವುದು ತಪ್ಪು ಎಂದು ಶಾಸಕ ಕಾಮತ್ ಹೇಳಿದ್ದಾರೆ. ರಾಜ್ಯದ ಸಚಿವರೊಬ್ಬರ ಆಪ್ತ ಸಹಾಯಕರೊಬ್ಬರು 25 ಲಕ್ಷ ರೂಪಾಯಿ ಲಂಚದ ಹಣವನ್ನು ವಿಧಾನಸೌಧದ ಬಳಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಮಾತನಾಡಲಿ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಇನ್ನು ನಳಿನ್ ಕುಮಾರ್ ಕಟೀಲು ಅವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಬಿಝಿ ಇದ್ದಾರೆ. ಆದರೆ ಕಾಂಗ್ರೆಸ್ ಮುಖಂಡರಿಗೆ ಮಾಡಲು ಕೆಲಸವಿಲ್ಲದೆ ಬಿಜೆಪಿ ನಾಯಕರ ಚಾರಿತ್ರ್ಯಹರಣ ಮಾಡುವುದೇ ಉದ್ದೇಶ ಎಂದು ಶಾಸಕ ಕಾಮತ್ ಕಟುವಾಗಿ ಟೀಕಿಸಿದ್ದಾರೆ