Home Mangalorean News Kannada News  ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನ – ಡಾ. ಸುಬ್ರಹ್ಮಣ್ಯ ಭಟ್

 ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನ – ಡಾ. ಸುಬ್ರಹ್ಮಣ್ಯ ಭಟ್

Spread the love

 ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನ – ಡಾ. ಸುಬ್ರಹ್ಮಣ್ಯ ಭಟ್

ಕುಂದಾಪುರ: ಕೇವಲ‌ ಶಿಕ್ಷಣವೊಂದಿದ್ದರೆ ಸಾಲದು. ಅದರ ಜೊತೆಗೆ ಸಂಸ್ಕಾರವೂ ಬೇಕಾಗುತ್ತದೆ. ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ವ್ಯಕ್ತಿತ್ವ ವಿಕಸನದೊಂದಿಗೆ ಶಿಕ್ಷಣ ಕೊಡುತ್ತಿರುವ ವಿ.ವಿ.ವಿ‌ ಮಂಡಳಿ ಆಡಳಿತ ಜನತಾ ಪ್ರೌಢ ಶಾಲೆ ಹಾಗೂ ರತ್ತು ಬಾಯಿ ಪ್ರೌಢ ಶಾಲೆಯ ಬಗ್ಗೆ ಜನರಲ್ಲಿ ಬಹಳಷ್ಟು ಮೆಚ್ಚುಗೆ ಇದೆ ಎಂದು ಕಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಭಟ್ ಅಭಿಪ್ರಾಯಪಟ್ಟರು.

ಗುರುವಾರ ವಿ.ವಿ.ವಿ ಮಂಡಳಿ ಆಡಳಿತದ ಹೆಮ್ಮಾಡಿಯ ಜನತಾ ಪ್ರೌಢ ಶಾಲೆಯಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ನಿಯೋಜಿತ ಭಾಷಣ ಮಾಡಿದರು.

ಗುರು-ಹಿರಿಯರಿಗೆ ಗೌರವ ಕೊಡದ‌ ಮಕ್ಕಳಿಂದ‌ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ. ಯಾರಿಗೆ ಒಳ್ಳೆಯ ಸಂಸ್ಕಾರ ಸಿಗುತ್ತೋ ಆತ‌ ಮುಂದೊಂದು ದಿನ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ. ಶಿಕ್ಷಣ ಯಾವ ಮಾಧ್ಯಮ‌ ಎನ್ನುವುದು‌ ಮುಖ್ಯವಲ್ಲ. ಯಾವ ಸಂಸ್ಥೆಯಲ್ಲಿ, ಯಾವ ಶಿಕ್ಷಕರಿಂದ ಸಿಗುತ್ತದೆ ಎನ್ನುವುದು ಮುಖ್ಯ. ಶಿಕ್ಷಣ ಎಂದರೆ ಮಕ್ಕಳಲ್ಲಿ ಸಿಲೆಬಸ್ ಅನ್ನು ಹೇರುವುದಲ್ಲ. ಮಕ್ಕಳಲ್ಲಿರುವ ಪ್ರತಿಭೆ, ವಿಚಾರವಂತಿಕೆಯನ್ನು ಹೊರತರುವುದೇ ನಿಜವಾದ ಶಿಕ್ಷಣ ಎಂದರು.

ಪರೀಕ್ಷೆಯಲ್ಲಿ ಅಂಕ ಗಳಿಸುವುದು ಮುಖ್ಯವಲ್ಲ. ಅಂಕವನ್ನು ಗಳಿಸಲು ಹೇಗೆ ಪ್ರಯತ್ನ‌ ಮಾಡುತ್ತೇವೆ ಎನ್ನುವುದು ಮುಖ್ಯ. ನಿದ್ದೆ ಬಿಟ್ಟು ಓದುವುದು ಮುಖ್ಯವಲ್ಲ. ವಿಷಯಗಳನ್ನು ಅಧ್ಯಯನ‌ ಮಾಡುವುದು ಮುಖ್ಯ ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವಿವಿ.ವಿ ಮಂಡಳಿಯ ಅಧ್ಯಕ್ಷ‌ ಕೆ. ಗೋಪಾಲ ಪೂಜಾರಿ, ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕೂಡಲೇ ದುರಸ್ತಿ ಕಾರ್ಯ ನಡೆಸಲಾಗುವುದು. ಮೂಲಭೂತ ಸೌಕರ್ಯಗಳ ಬೇಡಿಕೆಯನ್ನು ಹಂತ ಹಂತವಾಗಿ ಪೂರೈಸುತ್ತೇವೆ. ಆಂಗ್ಲ ಭಾಷಾ ಶಿಕ್ಷಕರ ಬೇಡಿಕೆ ಇದ್ದು, ಈಗಾಗಲೇ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ‌ ನಡೆಸಲಾಗಿದ್ದು, ಹದಿನೈದು ದಿನಗಳೊಳಗೆ ಆ ಹುದ್ದೆ ಭರ್ತಿಯಾಗಲಿದೆ ಎಂದ ಅವರು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಕೊಡುವುದು ನಿಮ್ಮೆಲ್ಲರ ಜವಾಬ್ದಾರಿ ಎಂದರು.

ಆಡಳಿತ ಮಂಡಳಿಯ ನಿರ್ದೇಶಕ, ಉದ್ಯಮಿ ಸಂದೀಪ ಪೂಜಾರಿ, ರಾಜ್ಯ ಮಟ್ಟದ ಕ್ರೀಡಾಪಟು, ಶಾಲೆಯ ಹಳೆ‌ ವಿದ್ಯಾರ್ಥಿಗಳಾದ ಸುಜಯ್, ನುವಾ ಫಾತಿಮಾ, ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕೆ ಸಹಕರಿಸಿದ ಸೈನ್ಸ್ ವರ್ಲ್ಡ್ ಲ್ಯಾಬ್ ನ ಕಿರಣ್ ದೇವಾಡಿಗ ಜಾಲಾಡಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಿವಿವಿ ಮಂಡಳಿಯ ಉಪಾಧ್ಯಕ್ಷ ಎಸ್ ರಾಜು ಪೂಜಾರಿ, ನಿರ್ದೇಶಕ ಶೀನ ಪೂಜಾರಿ, ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ‌ ಪ್ರಾಂಶುಪಾಲ ಗಣೇಶ್ ಮೊಗವೀರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದಿ ದೇವಾಡಿಗ, ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ರತ್ತುಬಾಯಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆನಂದ ಮದ್ದೋಡಿ, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ಪೋಷಕ ಪ್ರತಿನಿಧಿ ಬಾಬು ಕಟ್ಟು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಮಂಜು ಕಾಳಾವರ ಶಾಲಾ ವರದಿ ಹಾಗೂ ವಿದ್ಯಾರ್ಥಿ ನಾಯಕ ಪ್ರೀತಮ್ ಎಸ್ ಶಾಲಾ‌ ಸರ್ಕಾರದ ವರದಿ ವಾಚಿಸಿದರು. ವಿ.ವಿ.ವಿ ಮಂಡಳಿ ನಿರ್ದೇಶಕ ರಘುರಾಮ್ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ವಿಠಲ ನಾಯ್ಕ್ ಧನ್ಯವಾದವಿತ್ತರು. ಕನ್ನಡ ಶಿಕ್ಷಕ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version