ಸಂಸ್ಕೃತಿ, ಸಂಪ್ರದಾಯಗಳೇ ನಮ್ಮ ಆಸ್ತಿ : ಜ್ಯೋತಿ ಸಾಲಿಗ್ರಾಮ
ಹೆಮ್ಮಾಡಿಯಲ್ಲಿ ‘ ಗಜ್ಮೈಕ್ 2024 ‘ ಕಾರ್ಯಕ್ರಮ.
ಕುಂದಾಪುರ: ಕುಂದಾಪ್ರ ಕನ್ನಡ ಭಾಷೆ ಎಂದರೆ ಅದು ಕೇವಲ ಭಾಷೆಯಲ್ಲ, ಭಾವನೆಗಳನ್ನು ಬೆಸೆಯುವ ಹೃದಯದ ಭಾಷೆ. ಇಲ್ಲಿನ ನೆಲದ ಸಂಸ್ಕೃತಿ, ಭಾಷೆ ಹಾಗೂ ಪರಂಪರೆಗಳಿಗೆ ನೂರಾರು ವರ್ಷದ ಇತಿಹಾಸವಿದೆ. ನಮ್ಮ ಆಸ್ತಿಯಾದ ಇಲ್ಲಿನ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಉಳಿಸಿ-ಬೆಳೆಸುವ ಕಟಿಬದ್ಧತೆ ಎಲ್ಲರಲ್ಲಿಯೂ ಬೆಳೆಯಬೇಕು ಎಂದು ಸಮುದಾಯ ಬಾನುಲಿ ಕೇಂದ್ರ ಕುಂದಾಪುರದ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಹೇಳಿದರು.
ಹೆಮ್ಮಾಡಿಯ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ಸೋಮವಾರ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಅಂಗವಾಗಿ ನಡೆದ ‘ ಗಜ್ಮೈಕ್ -2024 ‘ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಂದಾಪ್ರ ಕನ್ನಡದ ಹಾಸ್ಯ ಕಲಾವಿದ ಚೇತನ್ ಕುಮಾರ್ ನೈಲಾಡಿಯವರು, ಅಬ್ಬಿ (ತಾಯಿ) ಭಾಷೆ ಎನ್ನುವ ಅಭಿಮಾನ ನಮ್ಮಲ್ಲಿ ಜಾಗೃತವಾಗಬೇಕು. ಕೇವಲ ತೋರಿಕೆಗಾಗಿ ಭಾಷಾಭಿಮಾನ ವ್ಯಕ್ತವಾಗಬಾರದು. ನಮ್ಮದು ಎನ್ನುವ ಅಂತರ್ಯದ ಪ್ರೀತಿಯೊಂದಿಗೆ ಅಭಿಮಾನ ಹೆಚ್ಚಾಗಬೇಕು ಎಂದು ಹೇಳಿದ ಅವರು, ಕುಂದಾಪ್ರ ಕನ್ನಡದ ವಿವಿಧ ಸಂಪ್ರದಾಯಗಳನ್ನು ಹಾಸ್ಯ ಶೈಲಿಯಲ್ಲಿ ಹೇಳುವುದರೊಂದಿಗೆ, ನೆಲದ ಸಂಸ್ಕ್ರತಿ ಸಂಪ್ರದಾಯದ ಮಹತ್ವವನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಮಾತನಾಡಿದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ, ಪ್ರಾಂಶುಪಾಲ ಗಣೇಶ ಮೊಗವೀರ ಅವರು, ಭಾಷಾಭಿಮಾನ ನಮ್ಮೆಲ್ಲರ ಆದ್ಯ ಕರ್ತವ್ಯ, ಭಾಷೆಯ ಬಲವರ್ಧನೆಗಾಗಿ ಕಾಲೇಜಿನಲ್ಲಿ ಹತ್ತಾರು ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗಾಗಿ ಶ್ರಮಿಸುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಕಾಳಾವರ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಇದ್ದರು. ಸಭಾ ಕಾರ್ಯಕ್ರಮದ ಬಳಿಕ ಜನತಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ‘ ಶ್ಲಾಘನಾ ಶನಯ ‘ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ ‘ ಗೌಜ್ ಗಮ್ಮತ್ ‘ ಕುಂದ ಕನ್ನಡದ ಸಾಂಸ್ಕೃತಿಕ ವೈಭವ ನಡೆಯಿತು.
ಜನತಾ ಕಾಲೇಜಿನ ಉಪ-ಪ್ರಾಂಶುಪಾಲ ರಮೇಶ ಪೂಜಾರಿ ಸ್ವಾಗತಿಸಿದರು, ಉಪನ್ಯಾಸಕರಾದ ಉದಯ ನಾಯ್ಕ ನಿರೂಪಿಸಿದರು, ಗುರುರಾಜ್ ವಂದಿಸಿದರು.