Home Mangalorean News Kannada News ಸಖಿ ಒನ್ ಸ್ಟಾಪ್ ಸೆಂಟರ್ ಉದ್ಘಾಟನೆ: ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ- ಮನೇಕಾ ಗಾಂಧಿ  

ಸಖಿ ಒನ್ ಸ್ಟಾಪ್ ಸೆಂಟರ್ ಉದ್ಘಾಟನೆ: ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ- ಮನೇಕಾ ಗಾಂಧಿ  

Spread the love

ಸಖಿ ಒನ್ ಸ್ಟಾಪ್ ಸೆಂಟರ್ ಉದ್ಘಾಟನೆ: ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ- ಮನೇಕಾ ಗಾಂಧಿ  

ಉಡುಪಿ : ಮಹಿಳೆಯರ ನೋವುಗಳಿಗೆ ಸ್ಪಂದಿಸಿ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ವನ್ ಸ್ಟಾಪ್ ಸೆಂಟರ್ ಆರಂಭಿಸುವ ಯೋಜನೆಯನ್ನು  ಕೇಂದ್ರ ಸರ್ಕಾರ ಆರಂಭಿಸಿದ್ದು, ಈವರೆಗೆ ಒಟ್ಟು 171 ಕೇಂದ್ರಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ಉಡುಪಿಯಲ್ಲಿ  ಪ್ರಥಮ ಕೇಂದ್ರ ಆರಂಭವಾಗಿವೆ; ಮಹಿಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಮನೇಕಾ ಗಾಂಧಿ ತಿಳಿಸಿದ್ದಾರೆ.

ಅವರು ಸೋಮವಾರ ನಿಟ್ಟೂರಿನಲ್ಲಿ, 37.50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ರಾಜ್ಯದ ಮೊದಲ ‘ಸಖಿ ವನ್ ಸ್ಟಾಪ್ ಸೆಂಟರ್’ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ ದಾವಣಗೆರೆ, ಧಾರವಾಡ, ಚಿತ್ರದುರ್ಗ, ಚಾಮರಾಜನಗರ, ತುಮಕೂರು, ಮೈಸೂರು, ಬಾಗಲಕೋಟೆ ಮತ್ತು ಉಡುಪಿಯಲ್ಲಿ ಈ ಕೇಂದ್ರ ತೆರೆಯಲು ಅನುಮತಿ ನೀಡಿದ್ದು, ಉಡುಪಿಯಲ್ಲಿ ಪ್ರಥಮ ಕೇಂದ್ರ ಉದ್ಘಾಟನೆಗೊಂಡಿದೆ ಎಂದು ಅವರು ಹೇಳಿದರು. ಕನಿಷ್ಠ ಎಂಟು ಹಾಸಿಗೆಯುಳ್ಳ ನರ್ಸ್, ಡಾಕ್ಟರ್, ಲಾಯರ್, ಪೊಲೀಸ್, ಕೌನ್ಸಿಲರ್‍ಗಳನ್ನೊಳಗೊಂಡ ಕೇಂದ್ರ ವಿದಾಗಿದ್ದು ನೊಂದ ಮಹಿಳೆಯಿರಿಗೆ ನೆರವಾಗುವ ಸಾಂತ್ವನ ಕೇಂದ್ರವಿದಾಗಿದೆ.

ಮಹಿಳೆಯರು ತಮ್ಮ ಮೇಲೆ ದೌರ್ಜನ್ಯಗಳಾದರೆ ಸಮಾಜ ಮಹಿಳೆಯನ್ನೇ ದೋಷಿಯನ್ನಾಗಿ ಮಾಡುವ ಪರಿಸರ ನಮ್ಮದು; ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದರೆ ಪೊಲೀಸರು ಪ್ರಕರಣ ದಾಖಲಿಸುವಲ್ಲಿ ತೋರುವ ನಿರ್ಲಕ್ಷತೆಯಿಂದ ಅವರು ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಸಹಿಸಿಕೊಳ್ಳುವ ಪರಿಸ್ಥಿತಿ ಇತ್ತು. ಆಸ್ಪತ್ರೆಗಳಲ್ಲೂ ಇದೇ ಕಥೆ; ಇದಕ್ಕಾಗಿ ಕೇಂದ್ರ ಸರ್ಕಾರ ಪೊಲೀಸ್ ನೇಮಕಾತಿಯಲ್ಲಿ 33% ಮಹಿಳೆಯರಿಗೆ ಮೀಸಲು ಜಾರಿಗೆ ತಂದಿದ್ದು, 7 ರಾಜ್ಯಗಳು ಈಗಾಗಲೇ ಈ ನಿಯಮ ಅಳವಡಿಸಿಕೊಳ್ಳಲು ಮುಂದಾಗಿದೆ.

ಮಥುರಾ, ಬೃಂದಾವನದಲ್ಲಿ ತ್ಯಜಿಸಲ್ಪಟ್ಟ ವಿಧವೆಯರಿಗಾಗಿ 1000 ಬೆಡ್‍ಗಳ ಕೇಂದ್ರ ಆರಂಭಿಸಲಾಗಿದೆ, ವ್ಯಕ್ತಿಯ ಮರಣದ ನಂತರ ಆತನ ಮರಣ ಪ್ರಮಾಣಪತ್ರದಲ್ಲಿ ಪತ್ನಿಯ ಹೆಸರನ್ನು ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದರಿಂದ ಪತಿಯ ನಿಧನದ ನಂತರ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.  ಮಹಿಳೆಯರಿಗೆ ಮಾತೃತ್ವ ರಜೆಯನ್ನು 6 ತಿಂಗಳ ವರೆಗೆ ವಿಸ್ತರಿಸಲಾಗಿದ್ದು,  ಆಸಿಡ್ ದಾಳಿಗೆ ಒಳಗಾದ ಮಹಿಳೆಯನ್ನು ಅಂಗವಿಕಲರು ಎಂದು ಪರಿಗಣಿಸಿ, ಅಂಗವಿಕಲರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ  ಎಂದು ಮನೇಕಾ ಗಾಂಧೀ ಹೇಳಿದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡೆ ಎಲ್ಲಾ ಸೌಲಭ್ಯ ನೀಡುವ ಉದ್ದೇಶದಿಂದ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಈ ಸೆಂಟರ್ ನಲ್ಲಿ ಮಹಿಳೆಯರಿಗೆ ಸಹಾಯ ಮಾಡಲು, ತಲಾ ಒಬ್ಬರು ಆಪ್ತ ಸಮಾಲೋಚಕರು, ವೈದ್ಯರು, ವಕೀಲರು, ಪೊಲೀಸ್ ಇರಲಿದ್ದು, ಈ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತಂಗಲು ಸಹ ವ್ಯವಸ್ಥೆಯಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಸದರಾದ ಶೋಭಾ ಕರಂದ್ಲಾಜೆ ಮಾತನಾಡಿ, ದೌರ್ಜನ್ಯಕ್ಕೆ ಒಳಗಾದ ರಾಜ್ಯದ ಯಾವುದೇ ಭಾಗದ ಮಹಿಳೆಯರು ಈ ಕೇಂದ್ರದ 181 ಸಂಖ್ಯೆಗೆ ಕರೆ ಮಾಡಬಹುದು, ಕೂಡಲೇ ಅವರು ಇರುವ ಸ್ಥಳದಲ್ಲೇ ಅಂಬುಲೈನ್ಸ್ ಸಹಿತ ಸಿಬ್ಬಂದಿಯನ್ನು ಕಳುಹಿಸಿ ಅವರು ಮತ್ತು ಅವರ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು, ನೊಂದ ಮಹಿಳೆಯರಿಗೆ ಎಲ್ಲಾ ರೀತಿಯ ಸಾಂತ್ವನ ಈ ಕೇಂದ್ರದಲ್ಲಿ ದೊರೆಯಲಿದೆ ಎಂದು ಹೇಳಿದರು.

 ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸಖಿ ಕೇಂದ್ರ 1974ರಲ್ಲಿ ಮನೋರಮಾ ಮಧ್ವರಾಜ್ ಅವರು ಸಚಿವರಾಗಿದ್ದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಿದ ಭೂಮಿಯಲ್ಲಿ ನೆರವೇರಿರುವುದು ಅಭಿಮಾನದ ಸಂಗತಿ ಎಂದರು. ಈ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಸಿಬ್ಬಂದಿಗಳನ್ನು ನಿಯೋಜಿಸಿ ಶೋಷಿತ ಮಹಿಳೆಯರಿಗೆ ಸೂಕ್ತ ನ್ಯಾಯ ನೀಡುವ ಕೇಂದ್ರವನ್ನಾಗಿಸಲು ಜಿಲ್ಲಾಡಳಿತಕ್ಕೆ ಎಲ್ಲ ನೆರವನ್ನು ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಮಕ್ಕಳ ಹಕ್ಕು ಆಯೋಗದ ಸದಸ್ಯರಾದ ವನಿತಾ ತೊರವಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ, ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೊನ್ಸ್ವಾಲಿಸ್ ಸ್ವಾಗತಿಸಿದರು.  ಉಡುಪಿ ತಾಲೂಕು ಶಿಶು ಅಭಿವೃದ್ದಿ ಅಧಿಕಾರಿ ವೀಣಾ ನಿರೂಪಿಸಿದರು.  ಕರ್ನಾಟಕ ರಾಜ್ಯ ಸಮಾಜಕಲ್ಯಾಣ ಮಂಡಳಿಯ ಅಧ್ಯಕ್ಷರು ಟಿ.ವೆಂಕಟಲಕ್ಷ್ಮಿ ಬಸವಲಿಂಗರಾಜು ಪ್ರಾಸ್ತವಿಕ ಮಾತನಾಡಿದರು.


Spread the love

Exit mobile version