ಸಚಿವೆ ಜಯಮಾಲಾರಿಗೆ ಮುತ್ತಿಗೆ; ವರ್ತನೆ ಮರುಕಳಿಸದಂತೆ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಪ್ರಮೋದ್ ಮಧ್ವರಾಜ್
ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಅವರಿಗೆ ಅಗೌರವ ಕಾಂಗ್ರೆಸ್ ಕಾರ್ಯಕರ್ತರು ತೋರಿಸುವ ವರ್ತನೆಯನ್ನು ತಾನು ಎಂದಿಗೂ ಸಹಿಸುವುದಿಲ್ಲ. ಒಂದು ವೇಳೆ ಇಂತಹ ವರ್ತನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಯಾರಾದರೂ ಮುಂದುವರೆಸಿದ್ದೇ ಆದರೆ ಮುಂದಿನ ದಿನಗಳಲ್ಲಿ ಅಂತಹ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲಕ್ಕೆ ನಾನು ಖಂಡಿತವಾಗಿಯೂ ನಿಲ್ಲುವುದಿಲ್ಲ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಮಾಜಿ ಸಚಿವ ಹಾಗೂ ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್ ನೀಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಜಯಮಾಲ ಅವರು ಒರ್ವ ಅನುಭವಸ್ಥ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಕಳೆದ 25 ವರ್ಷಗಳಿಂದ ಒರ್ವ ನಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಚುನಾವಣೆಗೆ ನಿಂತು ಗೆಲ್ಲದೆ ಇರಬಹುದು ಆದರೆ ಒರ್ವ ಕಲಾವಿದೆಯಾಗಿ ಕಲಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಾಧಕ ಮಹಿಳೆ ಅವರು. ವಿಧಾನಪರಿಷತ್ತಿನಲ್ಲಿ ಮೊದಲ ಬಾರಿಗೆ ಒರ್ವ ಮಹಿಳೆ ಸಭಾನಾಯಕಿಯಾಗಿರುವುದು ಇತಿಹಾಸದಲ್ಲಿ ಪ್ರಥಮವಾಗಿದ್ದು ಅವರನ್ನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ನೇಮಕ ಮಾಡಿದ್ದು ಅತ್ಯುತ್ತಮ ಸೇವೆಯನ್ನು ಅವರು ನೀಡುತ್ತಿದ್ದಾರೆ.
ಆದರೆ ಬೇಸರದ ಸಂಗತಿ ಎಂದರೆ ಒರ್ವ ಮಹಿಳಾ ಸಚಿವೆಯಾಗಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಅತ್ಯುತ್ತಮ ಸೇವೆ ನೀಡುತ್ತಿರುವಾಗ ಇಂದು ಪಕ್ಷದ ಕೆಲವೊಂದು ಕಾರ್ಯಕರ್ತರು ಅವರೊಂದಿಗೆ ನಡೆದುಕೊಂಡ ರೀತಿಯಿಂದಾಗಿ ಸಚಿವರು ತುಂಬಾ ನೊಂದಿದ್ದಾರೆ. ತನಗೆ ಉಡುಪಿ ಜಿಲ್ಲೆಯ ಉಸ್ತುವಾರಿಯಿಂದ ಮುಕ್ತಗೊಳಿಸುವಂತೆ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಯವರಲ್ಲಿ ವಿನಂತಿಸಲು ಅವರು ಈಗಾಗಲೇ ನಿರ್ಧರಿಸಿದ್ದಾರೆ. ನಾವು ಪಕ್ಷದ ನಾಯಕರಾಗಿ ಸದಾ ನಿಮ್ಮ ಸೇವೆ ಲಭ್ಯರಾಗಿದ್ದೇವೆ. ನಾನು ಕೂಡ ಪಕ್ಷದ ಕಾರ್ಯಕರ್ತರ ಪರವಾಗಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಆದರೆ ಭಾರತ್ ಬಂದ್ ವೇಳೆ ನಡೆದ ಲಾಠಿ ಚಾರ್ಜ್ ವಿಚಾರವನ್ನು ಇಟ್ಟುಕೊಂಡು ಸಚಿವರೊಂದಿಗೆ ಈ ರೀತಿಯ ವರ್ತನೆ ಮಾಡಿರುವುದು ಸರಿಯಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ವರ್ಗಾವಣೆ ಕುರಿತು ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿಗಳಲ್ಲಿ ನಾನು ಮತ್ತು ಸಚಿವರು ಈಗಾಗಲೇ ಮಾತನಾಡಿದ್ದೇವೆ. ಲಾಠಿ ಚಾರ್ಜ್ ವೇಳೆ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಪೆಟ್ಟು ಬಿದ್ದಿದೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ. ನಿಮಗಿಂತ ಹೆಚ್ಚಿನ ಪೆಟ್ಟು ಬಿಜೆಪಿ ಕಾರ್ಯಕರ್ತರಿಗೂ ಬಿದ್ದಿದೆ ಎನ್ನುವುದು ಗಮನದಲ್ಲಿರಲಿ. ಘಟನೆಯ ವಿವರ ಮುಖ್ಯಮಂತ್ರಿಗಳ ಗಮನದಲ್ಲಿದೆ ಹಾಗಾಗಿ ಎಸ್ಪಿಯವರನ್ನು ವರ್ಗಾವಣೆ ಮಾಡುವುದು ಬಿಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರವಾಗಿದೆ ಎಂದು ಪ್ರಮೋದ್ ಹೇಳಿದರು.
ಕಾರ್ಯಕರ್ತರ ಇಂತಹ ಬೆಜವಾಬ್ದಾರಿ ವರ್ತನೆ ನಮಗೆ ನಿಜಕ್ಕೂ ಮುಜುಗುರಕ್ಕೆ ಕಾರಣವಾಗುತ್ತದೆ. ಮಾಧ್ಯಮಗಳಲ್ಲಿ ಬೆಳಿಗ್ಗೆ ನಡೆದ ಘಟನೆ ಪ್ರಸಾರವಾದ ಬಳಿಕ ಸಚಿವರು ಇದರಿಂದ ತುಂಬಾ ನೊಂದಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ವರ್ತನೆ ಮುಂದುವರೆಸಿದರೆ ನಾನೂ ಕೂಡ ನಿಮ್ಮ ಜೊತೆ ಇರುವುದಿಲ್ಲ. ಇಂತಹ ವರ್ತನೆಯನ್ನು ನಾನು ಕೂಡ ಸಮರ್ಥಿಸುವುದಿಲ್ಲ. ನಾನು ಜಿಲ್ಲಾಧ್ಯಕ್ಷರ ಅನುಮತಿ ಪಡೆದೇ ಒಂದು ತಿಂಗಳ ಸಿಕ್ ಲಿವ್ ತೆಗೆದುಕೊಂಡಿದ್ದೇನೆ. ಒಂದು ವೇಳೆ ಕಾರ್ಯಕರ್ತರು ನಮಗೆ ಇರಿಸು ಮುರಿಸು ತರುವ ರೀತಿಯ ವರ್ತನೆ ಮುಂದುವರೆಸಿದರೆ ನಾನು ನನ್ನ ಸಿಕ್ ಲೀವ್ ಶಾಶ್ವತವಾಗಿ ಪಡೆದುಕೊಳ್ಳಬೇಕಾದೀತು. ಇನ್ನು ಮುಂದೆಯಾದರೂ ನಿಮ್ಮ ವರ್ತನೆ ಸುಧಾರಿಸಿಕೊಂಡು ಪಕ್ಷ ಸಂಘಟನೆಯತ್ತ ಗಮನ ನೀಡಿ. ಎಸ್ಪಿಯವರ ವರ್ಗಾವಣೆ ವಿಚಾರ ಬಿಟ್ಟು ಮುಂಬರುವ ಲೋಕ ಸಂಪರ್ಕ ಅಭಿಯಾನಕ್ಕೆ ಕೈ ಜೋಡಿಸಿ ನಾನೂ ಕೂಡ ಪ್ರತಿ ವಾರ್ಡಿಗೆ ನಿಮ್ಮ ಜೊತೆ ಬರಲು ತಯಾರಿದ್ದೇನೆ ಎಂದು ಕಾರ್ಯಕರ್ತರಿಗೆ ಸ್ಪಷ್ಟ ಎಚ್ಚರಿಕೆ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರು ಭಾರತ್ ಬಂದ್ ಸಮಯದಲ್ಲಿ ಪಕ್ಷದ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸಿದ ಘಟನೆ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಪಕ್ದದ ಜಿಲ್ಲಾ ಮುಖಂಡರಿಂದ ಪಡೆದು ಸೂಕ್ತ ರೀತಿಯಲ್ಲಿ ಕಾನೂನಿನ ನೆಲೆಯಲ್ಲಿ ನೆರವಿಗೆ ಕ್ರಮ ಕೈಗೊಂಡಿದ್ದೇನೆ. ಈ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರು ಗೊಂದಲಕ್ಕೊಳಬೇಕಾಗಿಲ್ಲ. ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಕಡೆಗಣಿಸುವಂತಹ ಕೆಲಸವನ್ನು ನಾನು ಯಾವತ್ತೂ ಮಾಡಿಲ್ಲ. ಪಕ್ಷ ನೀಡಿದ ಜವ್ದಾರಿಯನ್ನು ಪ್ರಮಾಣಿಕವಾಗಿ ನೆರವೇರಿಸಿಕೊಂಡು ಹೋಗಿದ್ದೇನೆ. ಪಕ್ಷದ ಕಾರ್ಯಕರ್ತರ ನ್ಯಾಯಸಮ್ಮತ ಹಿತಾಸಕ್ತಿಗಾಗಿ ಸದಾ ಬೆಂಬಲಕ್ಕಿದ್ದೇನೆ ಎಂದರು.
ನನ್ನ ಪಕ್ಷ ನಿಷ್ಠೆಯನ್ನು ಯಾರು ಪ್ರಶ್ನೆ ಮಾಡುವಂತಗಾಬಾರದು ಅನ್ನುವಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ನಾನು ಕೆಲಸ ಮಾಡುತ್ತಿದ್ದೇನೆ . ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಕರ್ತರು ನಿಷ್ಠೆ ಯಿಂದ ಕೆಲಸ ಮಾಡಬೇಕು, ಪಕ್ಷದ ಆತಂರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸುಂತಾಗಬೇಕು, ಬಹಿರಂಗ ಚರ್ಚೆ ಮಾಡುವುದು ಸೂಕ್ತವಲ್ಲ ಎಂದು ಸಚಿವರು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾರ್ಯದರ್ಶಿ ನರಸಿಂಹ ಮೂರ್ತಿ ಉಡುಪಿ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್, ಹಾಗೂ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷ ರು ಪದಾಧಿಕಾರಿಗಳು ಉಪಸ್ಥಿತರಿದ್ದರು.