ಸಚಿವ ಎಂ.ಬಿ.ಪಾಟೀಲ್ ಕ್ಷಮೆಯಾಚನೆಗೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಆಗ್ರಹ
ಮಂಗಳೂರು: ಪರಿಶಿಷ್ಟ ಸಮುದಾಯದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕೆಐಎಡಿಬಿ ಯಲ್ಲಿನ ನಿವೇಶನಗಳ ನಿಯಮಬಾಹಿರ ಮತ್ತು ಅಕ್ರಮ ಮಂಜೂರಾತಿ ಕುರಿತು ಮಾಡಿರುವ ಲೋಪಗಳ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಸೂಕ್ತ ಉತ್ತರ ನೀಡುವ ಬದಲು ಅವರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದು ಅಕ್ಷಮ್ಯ ಮತ್ತು ಖಂಡನೀಯ ಸಚಿವರು ಈ ವಿಚಾರದಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಲಿತ ಸಮುದಾಯವನ್ನು ಕಾಂಗ್ರೆಸ್ ಪಕ್ಷ ಓಟ್ ಬ್ಯಾಂಕ್ ಆಗಿ ಮಾತ್ರ ನೋಡುತ್ತಿದೆಯೇ ಹೊರತು ಅವರಿಗೆ ದಲಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಸ್ವಾತಂತ್ಯಪೂರ್ವದಲ್ಲಿ ಮತ್ತು ಸ್ವಾತಂತ್ರ್ಯಾನಂತರವೂ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿ, ಅವರನ್ನು ಅವಮಾನ ಮಾಡಿದ ವಿಚಾರ ದೇಶಕ್ಕೇ ಗೊತ್ತಿದೆ. ಕಾಂಗ್ರೆಸ್ ದೇಶದ ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನೂ ಬಿಟ್ಟಿಲ್ಲ ದಲಿತ ಸಮುದಾಯಕ್ಕೆ ಸೇರಿರುವ ಕರ್ನಾಟಕದ ರಾಜ್ಯಪಾಲರನ್ನೂ ಅವಹೇಳನ ಮಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವ ಎಂ.ಬಿ. ಪಾಟೀಲ್ ಅವಹೇಳನ ಮಾಡಿದ್ದಾರೆ. ಶೋಷಿತ ಸಮುದಾಯದ ನಾಯ ಕರ ಬಗ್ಗೆ ಹಗುರವಾಗಿ ಮಾತನಾಡಿರುವುದು ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಯ ಭಾಗವಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಇಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು ಖಂಡನೀಯ ಎಂದು ಅಭಿಪ್ರಾಯಪಟ್ಟರು. ಮುಖ್ಯ ಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಖಾಲಿಯಾಗುವ ಕುರ್ಚಿಗಾಗಿ ಟವಲ್ ಹಾಕಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಹುದ್ದೆಯ ಆಕಾಂಕ್ಷಿ ಗಳನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಅಸ್ಥಿರತೆ ಕಾಡುತ್ತಿದೆ. ಆಡಳಿತವೇ ಇಲ್ಲದ ಸ್ಥಿತಿ ಇದೆ ಎಂದ ಅವರು ಬಿಜೆಪಿ ನಾಯಕರ ವಿರುದ್ಧ ಆರೋಪ ಇದ್ದರೆ ಅದರ ಬಗ್ಗೆಯೂ ತನಿಖೆ ಮಾಡುವುದಕ್ಕೆ ನಮ್ಮ ಆಕ್ಷೇಪ ಇಲ್ಲ ನಮ್ಮ ನಿಲುವು ಕಾಂಗ್ರೆಸ್‌ನ ಕ್‌ಮೇಲ್‌ಗೆ ತಂತ್ರಕ್ಕೆ ಬಿಜೆಪಿ ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಜಿಲ್ಲಾ ವಕ್ತಾರರಾದ ಅರುಣ್ ಶೇಟ್‌ಮತ್ತು ರಾಜಗೋಪಾಲ್‌ರೈ, ಉಪಮೇಯರ್ ಸುನೀತಾ ಮತ್ತು ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.