Home Mangalorean News Kannada News ಸಚಿವ ಖಾದರ್ ಪ್ರಚಾರದ ಹೇಳಿಕೆ ಬಿಟ್ಟು, ರೇಶನ್ ಕಾರ್ಡ್ ನೀಡಲಿ – ಕೋಟ ಶ್ರೀನಿವಾಸ್...

ಸಚಿವ ಖಾದರ್ ಪ್ರಚಾರದ ಹೇಳಿಕೆ ಬಿಟ್ಟು, ರೇಶನ್ ಕಾರ್ಡ್ ನೀಡಲಿ – ಕೋಟ ಶ್ರೀನಿವಾಸ್ ಪೂಜಾರಿ

Spread the love

ಸಚಿವ ಖಾದರ್ ಪ್ರಚಾರದ ಹೇಳಿಕೆ ಬಿಟ್ಟು, ರೇಶನ್ ಕಾರ್ಡ್ ನೀಡಲಿ  – ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಬಡವರಿಗೆ ರೇಶನ್ ಅಂಗಡಿಗಳಲ್ಲಿ ವಿಮಾನದ ಟಿಕೇಟ್ ಅಗತ್ಯವಿಲ್ಲ ಬದಲಾಗಿ ಮೊದಲು ಅವರಿಗೆ ಸಮರ್ಪಕವಾಗಿ ರೇಶನ್ ಕಾರ್ಡನ್ನು ವಿತರಿಸುವ ಕೆಲಸವನ್ನು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು. ಟಿ. ಖಾದರ್ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಅವರು ಬುಧವಾರ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ, ರೇಶನ್ ಕಾರ್ಡ್ ವಿತರಣೆಯಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ, ಹಕ್ಕುಪತ್ರ, ಮರಳು ಸಮಸ್ಯೆ ವಿರುದ್ದ ಮಾಬುಕಳದಿಂದ ಕುಂದಾಪುರದ ತನಕ ಹಮ್ಮಿಕೊಂಡ ಪ್ರತಿಭಟನಾ ಪಾದಯಾತ್ರೆಯಲ್ಲಿ ಮಾತನಾಡಿದರು.

ರಾಜ್ಯದ ಆಹಾರ ಸಚಿವರು ದಿನಕ್ಕೊಂದು ಪ್ರಚಾರದ ಹೇಳಿಕೆಗಳನ್ನು ನೀಡುತ್ತಾ ಜನರಿಗೆ ಸ್ವರ್ಗವನ್ನು ತೋರಿಸುತ್ತಿದ್ದಾರೆ ಆದರೆ ಜನರಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ರೇಶನ್ ಅಂಗಡಿಗಳ ಮೂಲಕ ಪಡಿತರದಾರರಿಗೆ ವಿಮಾನದ ಟಿಕೇಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ತರಲು ಹೊರಟಿರುವ ಸಚಿವರು ಮೊದಲು ಬಡವರಿಗೆ ರೇಶನ್ ಕಾರ್ಡನ್ನು ಸಮರ್ಪಕವಾಗಿ ದೊರೆಯುವಂತೆ ಮಾಡುವ ಕೆಲಸ ಮಾಡಲಿ. ಬಡವರಿಗೆ ವಿಮಾನದಲ್ಲಿ ಹೋಗುವ ಅವಶ್ಯಕತೆ ಇಲ್ಲ ಬದಲಾಗಿ ಇವರೇ ಹೇಳಿಕೊಂಡಿರುವ ಅನ್ನಭಾಗ್ಯದ ಅಕ್ಕಿಯನ್ನು ಪಡೆಯಲು ಕೂಡ ಸಾಧ್ಯವಾಗದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಬಡವರಿಗೆ ಉಚಿತ ಅಕ್ಕಿಯನ್ನು ನೀಡಿದ್ದೇವೆ ಎಂದು ಪ್ರಚಾರ ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಸರಕಾರ ಅದರಲ್ಲಿ ಕೇಂದ್ರ ಸರಕಾರದ ಪಾಲು ಕೂಡ ಇದೆ ಎನ್ನುವುದನ್ನು ಹೇಳುತ್ತಿಲ್ಲ ಆದರೆ ಜನರಿಗೆ ಇದರ ಅರಿವು ಈಗಾಗಲೇ ಆಗಿದೆ. ಕಳೆದ ನಾಲ್ಕು ವರ್ಷಗಳಿಂದ ರೇಶನ್ ಕಾರ್ಡ್ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಾಗದ ಸರ್ಕಾರದ ಅನ್ನ ಭಾಗ್ಯದ ಅಕ್ಕಿ ಬಡವರಿಗೆ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಡ ಹಿಂದುಳೀದ ಮತ್ತು ಅಲ್ಪಸಂಖ್ಯಾತ ಮಕ್ಕಳೇ ಕಲಿಯುತ್ತಿರುವ ಕಲ್ಲಡ್ಕದ ಶ್ರೀರಾಮ ವಿದ್ಯಾಮಂದಿರದ ಶಾಲೆಗೆ ಬಿಜೆಪ ಸರಕಾರ ಇದ್ದ ಸಮಯದಲ್ಲಿ ಕೊಲ್ಲೂರು ದೇವಳದ ವತಿಯಿಂದ ಅನ್ನದಾನಕ್ಕೆ ಅನುದಾವನ್ನು ನೀಡಲು ಆರಂಭಿಸಿದ್ದು, ಕೇವಲ ದ್ವೇಷದ ರಾಜಕೀಯಕ್ಕಾಗಿ ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಸರಕಾರದ ಮೇಲೆ ಒತ್ತಡ ಹೇರಿ ಅದನ್ನು ರದ್ದುಗೊಳಿಸಿದ್ದಾರೆ ಇದು ಖಂಡನೀಯ ವಿಚಾರವಾಗಿದೆ. ಅವರು ದ್ವೇಷ ಸಾಧಿಸಿದ್ದು ಕಲ್ಲಡ್ಕ ಪ್ರಭಾಕರ ಭಟ್ ಮೇಲಲ್ಲ ಬದಲಾಗಿ ಅಲ್ಲಿ ಕಲಿಯುತ್ತಿರುವ ಹಿಂದುಳಿದ ವರ್ಗದ ಮಕ್ಕಳ ಮೇಲೆ ಎನ್ನುವುದು ಅವರಿಗೆ ಅರ್ಥವಾಗಿಲ್ಲ. ಕಲಿಯುತ್ತಿರುವ ಪುಟ್ಟ ಮಕ್ಕಳ ಅನ್ನವನ್ನು ಕಸಿದುಕೊಂಡಿರುವ ಸರಕಾರ ಬಡವರ ಸಹಾಯಕ್ಕೆ ಬರುತ್ತದೆ ಎನ್ನುವುದು ಕೇವಲ ಭ್ರಮೆ ಎಂದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸದಾ ಹಕ್ಕು ಪತ್ರದ ಕುರಿತು ಸದನದಲ್ಲಿ ಪ್ರಶ್ನಿಸಿದರೆ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿಕೆ ನೀಡುತ್ತಾರೆ ಆದರೆ ಇದುವರೆಗೆ ಬಡವರಿಗೆ ಹಕ್ಕು ಪತ್ರ ನೀಡಿಲ್ಲ. ಜಿಲ್ಲೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಮರಳಿನ ಸಮಸ್ಯೆ ಕಾಡುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತಿದೆ. ಕೇವಲ ಕಾಟಾಚಾರಕ್ಕೆ ಸಭೆ ನಡೆಸುವ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.

ಪ್ರತಿಭಟನಾ ಪಾದಯಾತ್ರೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಚಾಲನೆ ನೀಡಿ, ರಾಜ್ಯ ಸರಕಾರ ಜನರ ಸಮಸ್ಯೆಗಳನ್ನು ಅರಿಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸರಕಾರದ ವಿರುದ್ದ ಜನ ಆಕ್ರೋಶಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಬಿಜೆಪಿ ನಾಯಕರಾದ ಕಿರಣ್ ಕುಮಾರ್, ಗೀತಾಂಜಲಿ ಸುವರ್ಣ, ಬಾಬು ಶೆಟ್ಟಿ, ಯಶ್ಪಾಲ್ ಸುವರ್ಣ, ಸುಪ್ರಸಾದ್ ಶೆಟ್ಟಿ, ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ವಿಠಲ್ ಪೂಜಾರಿ, ವೀಣಾ ಶೆಟ್ಟಿ, ಚಂದ್ರಮೋಹನ್, ಭಾರತಿ ಚಂದ್ರಶೇಖರ್ ಹಾಗೂ ಇತರ ಅನೇಕ ನಾಯಕರು ಪಾಲ್ಗೊಂಡರು,

ಪ್ರತಿಭಟನಾ ಪಾದಯಾತ್ರೆ ಮಾಬುಕಳದಿಂದ ಆರಂಭವಾಗಿ, ರಾಷ್ಟ್ರೀಯ ಹೆದ್ದಾರಿ 66 ಮೂಲಕ ಸಾಸ್ತಾನ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ, ಕೋಟೇಶ್ವರ, ಕುಂದಾಪುರ ಸಾಗಿ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.

 


Spread the love

Exit mobile version