ಮಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆನರಾ ಸರ್ಫಿಂಗ್ ಅ್ಯಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಮಂತ್ರ ಸರ್ ಕ್ಲಬ್ ಹಾಗೂ ಜಿಲ್ಲಾಡಳಿತ ಆಯೋಜಿಸಿದ ಸರ್ಫಿಂಗ್ ಸ್ಪರ್ಧೆಗೆ ಸಸಿಹಿತ್ಲುವಿನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಸ್ಪರ್ಧೆಗೆ ರಾಜ್ಯದ ಪ್ರವಾಸೋದ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಆರ್ ವಿ ದೇಶ್ ಪಾಂಡೆ ಚಾಲನೆ ನೀಡಿದರು.
ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ದೇಶಪಾಂಡೆ ಅವರು ಮಂಗಳೂರಿನಲ್ಲಿ ಸರ್ಫಿಂಗ್ ಸ್ಪರ್ಧೆಗೆ ಅವಕಾಶವಿದ್ದು, ದೇಶವಿದೇಶಗಳಿಂದ ಸ್ಪರ್ಧೆಗೆ ಆಗಮಿಸುವ ಮುಕಾಂತರ ಬೃಹತ್ ಉತ್ಸವವನ್ನು ಕೈಗೊಳ್ಳಲು ಸಾಧ್ಯವಿದೆ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳು ಇದ್ದರೂ ಸಿಆರ್ ಝಡ್ ನಿಯಮಗಳು ತಡೆಯಾಗಿದ್ದು, ಅದರ ನಿಯಮಗಳ ಸರಳೀಕರಣವಾದರೆ ಪ್ರವಾಸೋದ್ಯಮವನ್ನು ಇಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿಗೊಳಿಸಬಹುದು. ಪ್ರವಾಸೋದ್ಯಮ ಅಭಿವೃದ್ದಿಗೆ ರಾಜ್ಯ ಸರಕಾರ ಬಜೆಟಿನಲ್ಲಿ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸದ್ದು, ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ 92 ಭಾಗಗಳಲ್ಲಿ ಬೀಚುಗಳನ್ನು 92 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ.
ಕರಾವಳಿಯ 9 ಬೀಚುಗಳ ಅಭಿವೃದ್ಧಿ ಮೂಲಭೂತ ಸೌಕರ್ಯ, ಭಧ್ರತೆ ವ್ಯವಸ್ಥೆ ಕಲ್ಪಿಸಲು 92 ಕೋಟಿ ರೂ ಶಿಫಾರಸುಗೊಂಡಿದ್ದು, ತ್ರಾಸಿ, ಸುರತ್ಕಲ್, ಮಲ್ಪೆ, ಮರವಂತೆ, ಮಾವಿನ ಕುರ್ವೆ, ಮುರ್ಡೇಶ್ವರ ಮೊದಲಾದ ಬೀಚುಗಳು ಪ್ರಸ್ತಾವನೆಯಲ್ಲಿವೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ, ಶಾಸಕ ಮೋಯ್ದಿನ್ ಬಾವಾ, ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾ, ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್, ಮಹಾನಗರ ಪಾಲಿಕೆಯ ಆಯುಕ್ತ ಡಾ ಎಚ್ ಎನ್ ಗೋಪಾಲಕೃಷ್ಣ, ತಾಪಂ ಮಹಮ್ಮದ್ ಇನ್ನಿತರರು ಉಪಸ್ಥಿತರಿದ್ದರು.