ಸಚಿವ ಬೊಮ್ಮಾಯಿ ಅವರಿಂದ ಕಡಲ್ಕೊರೆತ ಹಾಗೂ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ
ಉಡುಪಿ: ಜಿಲ್ಲೆಗೆ ಎನ್ .ಡಿ.ಆರ್. ಎಫ್ ಮೂಲಕ ಪ್ರವಾಹ ರಕ್ಷಣೆ ಹಾಗೂ ಪುನರ್ವಸತಿಗೆ ಬಳಕೆ ಮಾಡುವ ಸಲುವಾಗಿ ರೂ 10 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಂಗಳವಾರ ಜಿಲ್ಲೆಯ ಕಡಲ್ಕೊರೆತ ಹಾಗೂ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪಡುಬಿದ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಪ್ರಧಾನಮಂತ್ರಿ ಜೊತೆ ರಾಜ್ಯದ ನೆರೆ ಪರಿಸ್ಥಿತಿ ಕುರಿತು ಸೋಮವಾರ ಚರ್ಚಿಸಿದ್ದು, ರಾಜ್ಯದ ಎರಡು ಪ್ರಮುಖ ಸಮಸ್ಯೆಯ ಕುರಿತು ಪ್ರಧಾನಿ ಜೊತೆ ಮಾತನಾಡಿದ್ದೇವೆ. ಕಡಲ್ಕೊರೆತಕ್ಕೆ ಎಡಿಬಿ ನೆರವಿನೊಂದಿಗೆ ಶಾಶ್ವತ ಪರಿಹಾರ ಮಾಡುವ ಬಗ್ಗೆ ಚರ್ಚಿಸಿದ್ದು ಕಡಲ್ಕೊರೆತ ನಿಯಂತ್ರಣ ಕ್ಕೆ ಹೆಚ್ಚಿನ ಅನುದಾನ ನೀಡಲು ಬೇಡಿಕೆ ಇಡಲಾಗಿದೆ.
ಪಶ್ಚಿಮ ಘಟ್ಟದಲಿ ಭೂ ಕುಸಿತ ಆಗುವ ಸೂಕ್ಷ್ಮ ಪ್ರದೇಶಗಳ ಬಗ್ಗೆ ಸರ್ವೇ ಮಾಡಬೇಕಾಗಿದ್ದು ಅದನ್ನು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಮೂಲಕ ಸರ್ವೇಮಾಡಬೇಕು. ಸರ್ವೆಯ ಜೊತೆಗೆ ಮ್ಯಾಪಿಂಗ್ ಕೂಡಾ ಮಾಡಿಸಬೇಕು ಈ ನಿಟ್ಟಿನಲ್ಲಿ ಭೂಕುಸಿತ ತಡೆ ಹಾಗೂ ಶಾಶ್ವತ ಪುನರ್ವಸತಿ ಕುರಿತು ಪ್ರಧಾನಿಯವರ ಬಳಿ ಚರ್ಚಿಸಿದ್ದೇವೆ ಎಂದರು
ಕೊರೋನಾ ನಡುವೆಯೂ ಸ್ವಾತಂತ್ರ್ಯ ದಿನ ಆಚರಿಸುವ ಕುರಿತು ಕೇಂದ್ರದ ಗೈಡ್ ಲೈನ್ ಬಂದಿದೆ ಸ್ವಾತಂತ್ರ್ಯ ದಿನದಂದು ಕಮಾಂಡರ್ಸ್ ಇರ್ತಾರೆ ಆದ್ರೆ ಪರೇಡ್ ಇರಲ್ಲ. ಪರೇಡ್ ಇಲ್ಲ ಸೆಲ್ಯೂಟ್ ಇಲ್ಲ ನಿಯಮಾವಳಿ ಪ್ರಕಾರ ಆಚರಣೆಎಲ್ಲರೆದುರು ಧ್ವಜಾರೋಹಣ ಮಾಡಲಾಗುತ್ತೆ ಆದರೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ ನೇರ ವೀಕ್ಷಣೆಗೆ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಕೊರೋನಾ ಆತಂಕದ ನಡುವೆ ನೆರೆ ಪರಿಸ್ಥಿತಿ ನಿರ್ವಹಣೆ ವಿಚಾರ ನಿಯಂತ್ರಿಸೋದು ಸವಾಲಾಗಿದೆ. ನೆರೆ ಪರಿಹಾರವನ್ನು ಕೋರೋನಾ ನಿಯಮ ಮೀರಿ ಮಾಡಲಾಗುವುದಿಲ್ಲ. ಗಂಜಿ ಕೇಂದ್ರದಲ್ಲಿ ಕೊರೋನಾ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಇಂದು ರಾಜ್ಯ ಸಚಿವರ ಜೊತೆ ಪ್ರಧಾನಿ ವೀಡಿಯೋ ಕಾನ್ಫರೆನ್ಸ್ ಇದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಜಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ಜಿಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.