ಸಚಿವ ಯು.ಟಿ.ಖಾದರ್ ರಾಜಿನಾಮೆಗೆ ಬಿ.ಜೆ.ಪಿ ಆಗ್ರಹ
ಮಂಗಳೂರು : ಬುದ್ದಿವಂತರ ಜಿಲ್ಲೆ ಎಂದು ಹೆಸರು ಪಡೆದಿರುವ ದ.ಕ. ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವ ಯು.ಟಿ ಖಾದರ್ ರವರು ಅನುರಾಗ್ ತಿವಾರಿಯವರ ಪ್ರಕರಣಕ್ಕೆ ನೈತಿಕ ಹೊಣೆಯನ್ನು ಕೊಟ್ಟು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಬಿಜೆಪಿಯ ವಿಕಾಸ್ ಪುತ್ತೂರು ಆಗ್ರಹಿಸಿದ್ದಾರೆ.
ಕರ್ನಾಟಕ ಸರಕಾರದ ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಕಮಿಶನರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಐ.ಎ.ಎಸ್ ಅಧಿಕಾರಿ ಅನುರಾಗ್ ತಿವಾರಿಯವರ ನಿಗೂಡ ಸಾವು ಮೇಲ್ನೋಟಕ್ಕೆ ಹತ್ಯೆ ಎಂಬುದಾಗಿ ಮಾಧ್ಯಮದ ಮೂಲಕ ತಿಳಿದು ಬಂದಿರುತ್ತದೆ. ಇತ್ತೀಚೆಗೆ ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಬಹುಕೋಟಿ ರೂಪಾಯಿಗಳ ಹಗರಣವೊಂದು ಅನುರಾಗ್ ತಿವಾರಿಯವರ ನೇತ್ರತ್ವದಲ್ಲಿ ಬೆಳಕಿಗೆ ಬಂದಿರುತ್ತದೆ. ಇದರ ಬಗ್ಗೆ ಸಂಕ್ಷಿಪ್ತ ಮಾಹಿತಿಯುಳ್ಳ ವರದಿಯೊಂದನ್ನು ಅವರು ಸಿದ್ದಪಡಿಸಿದ್ದರು. ಈ ಬೆನ್ನಲೇ ಅವರ ಸಾವು ಹಲವು ಪ್ರಶ್ನೆಗಳಿಗೆ ಎಡೆ ಮಾಡಿ ಕೊಟ್ಟಿರುತ್ತದೆ. ಈ ಸಾವಿನ ಹಿಂದೆ ಕರ್ನಾಟಕದಲ್ಲಿ ವ್ಯಾಪಕವಾಗಿ ಹಬ್ಬಿರುವ ಮಾಫಿಯಾಗಳ ಕೈವಾಡ ಇರುವುದು ಕಂಡುಬರುತ್ತದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಹಿರಿಯ ಅಧಿಕಾರಿಗಳ ನಿಗೂಡ ಸಾವುಗಳು ಸಂಭವಿಸಿದ್ದು ಅವುಗಳ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿರುವಂತೆ ಕಾಣಿಸುವುದಿಲ್ಲ. ಈ ಎಲ್ಲಾ ಪ್ರಕರಣಗಳ ಬಗ್ಗೆ ಪ್ರಾಮಾಣಿಕ ತನಿಖೆಗೆ ಸರಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬರುವಂತ ದಿನಗಳಲ್ಲಿ ಬಾ.ಜ.ಪಾ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ವಿಕಾಸ್ ಪುತ್ತೂರು ಆಗ್ರಹಿಸಿದ್ದಾರೆ.