ಸಜಿಪನಡು, ಕರಾಯ, ಅಜ್ಜಾವರ ಪ್ರದೇಶಗಳು ಸೀಲ್ ಡೌನ್ ಮುಕ್ತ
ಮಂಗಳೂರು: ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಮೂರು ಪ್ರದೇಶಗಳನ್ನು ಸೀಲ್ ಡೌನ್ ಮುಕ್ತಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶಿಸಿದ್ದಾರೆ.
ಇದರಂತೆ ಬಂಟ್ವಾಳ ತಾಲೂಕಿನ ಸಜಿಪನಡು, ಬೆಳ್ತಂಡಿ ತಾಲೂಕಿನ ಕರಾಯ ಮತ್ತು ಸುಳ್ಯದ ಅಜ್ಜಾವರ ಸೀಲ್ ಡೌನ್ ಮುಕ್ತಗೊಂಡಿವೆ.
ಈ ಪ್ರದೇಶಗಳಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದೇ ಇರುವುದರಿಂದ ಹಾಗೂ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳ ಕ್ವಾರೆಂಟೈನ್ ಮುಕ್ತಾಯಗೊಂಡಿರುವುದು ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂರು ಪ್ರದೇಶಗಳಲ್ಲಿನ ಪಾಸಿಟಿವ್ ರೋಗಿಗಳು ಕೂಡ ಸಂಪೂರ್ಣ ಗುಣಮುಖರಾಗಿದ್ದಾರೆ.
ಸದ್ಯ ದ.ಕ. ಜಿಲ್ಲೆಯಲ್ಲಿ ಎಂಟು ಪ್ರದೇಶಗಳು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲ್ಪಟ್ಟಿವೆ. ಅವುಗಳೆಂದರೆ ಪುತ್ತೂರು ತಾಲೂಕಿನ ಸಂಪ್ಯ, ಉಪ್ಪಿನಂಗಡಿ, ಬಂಟ್ವಾಳ ತಾಲೂಕಿನ ಕಸಬಾ, ತುಂಬೆ, ನರಿಕೊಂಬು, ಮಂಗಳೂರು ತಾಲೂಕಿನ ಪಡೀಲ್ ಸಮೀಪದ ಫಸ್ಟ್ ನ್ಯೂರೋ ಆಸ್ಪತ್ರೆ, ಕುಲಶೇಖರ ಹಾಗೂ ತೊಕ್ಕೊಟ್ಟು.