ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

Spread the love

ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಮಂಗಳೂರು: ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯು ಜ್ಯೋತಿ ಜಂಕ್ಷನ್ ನಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಛೇರಿಯವರೆಗೆ ನಡೆಯಿತು. ಕೊನೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಯುವ ಹಿಂದೂ ಕಾರ್ಯಕರ್ತೆ ಕು. ಚೈತ್ರಾ ಕುಂದಾಪುರ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸನಾತನದ ಸಂತರಾದ ಪೂಜ್ಯ ರಮಾನಂದ ಗೌಡ ಇವರು ಉಪಸ್ಥಿತರಿದ್ದರು.

ಯುವ ಹಿಂದೂ ಕಾರ್ಯಕರ್ತೆ ಕು. ಚೈತ್ರಾ ಕುಂದಾಪುರ ಮಾತನಾಡಿ, ಈಶ್ವರನ ಶಕ್ತಿಯ ಮೇಲೆ ವಿಶ್ವಾಸ ಹೊಂದಿರುವ ಹಿಂದೂ ಸಂಘಟನೆಗಳನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೂ ಶಕ್ತಿಯನ್ನು ಸಹಿಸದೇ ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಸನಾತನ ಸಂಸ್ಥೆಯನ್ನು ಆರೋಪಿಯೆಂದು ಹೇಳಿ ಸನಾತನದ ಆಶ್ರಮಗಳನ್ನು ತನಿಖೆ ಮಾಡಿದರೆ ಕೇವಲ ಸಂತರ ಸತ್ಸಂಗ ಸಿಗಬಹುದು ವಿನಃ ಆರೋಪಿಗಳಲ್ಲ. ಪ್ರಗತಿಪರರು ಹೆಣ ಬಿದ್ದರೂ ಕೂಡ ಸ್ವಾರ್ಥಪ್ರೇರಿತವಾದ ದುರುದ್ದೇಶದಿಂದ ರಸ್ತೆಗಿಳಿದು ಪ್ರತಿಭಟಿಸುತ್ತಾರೆ ಅಷ್ಟೇ ಅಲ್ಲದೇ ತನಿಖಾ ವ್ಯವಸ್ತೆಯ ಮೇಲೆ ಒತ್ತಡ ನಿರ್ಮಾಣ ಮಾಡಿ ತನಿಖೆಯ ದಿಕ್ಕನ್ನು ಬದಲಾಯಿಸುತ್ತಿದ್ದಾರೆ. ಆದರೆ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಇದೇ ಪ್ರಗತಿಪರರು ಧ್ವನಿಯೆತ್ತುವುದಿಲ್ಲ ಎಂದು ಹೇಳುತ್ತಿದ್ದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಇವರು ಮಾತನಾಡುತ್ತಾ, ವಿಚಾರವಾದಿಗಳ ಹತ್ಯೆಯನ್ನು ಸನಾತನ ಸಂಸ್ಥೆಯ ಮೇಲೆ ಹೊರಿಸಿ ಅಪಪ್ರಚಾರ ಮಾಡುವ ಮೂಲಕ ಹಿಂದೂ ದ್ವೇಷವನ್ನು ಪ್ರಕಟಿಸುವ ವ್ಯವಸ್ಥಿತ ಷಡ್ಯಂತ್ರ್ಯವನ್ನು ಕೆಲವು ರಾಜಕೀಯ ಶಕ್ತಿಗಳು, ವಿಚಾರವಾದಿ ಸಂಘಟನೆಯವರು ಮಾಡುತ್ತಿದ್ದಾರೆ. ಸನಾತನ ಸಂಸ್ಥೆಯು ಆಧ್ಯಾತ್ಮ ಮತ್ತು ಹಿಂದುತ್ವದ ಕ್ಷೇತ್ರದಲ್ಲಿ ಶ್ರೇಷ್ಠವಾದ ಕಾರ್ಯವನ್ನು ಮಾಡುತ್ತಿರುವುದರಿಂದಲೇ ಹಿಂದೂ ವಿರೋಧಿ ಶಕ್ತಿಗಳ ಕೆಂಗಣ್ಣಿಗೆ ಸಂಸ್ಥೆಯ ಕಾರ್ಯವು ಗುರಿಯಾಗಿದೆ. ಸಂಸ್ಥೆಯ ಮಾನಹಾನಿಯನ್ನು ಮಾಡಲು ವ್ಯವಸ್ಥಿತವಾಗಿ ಸಂಚನ್ನು ಹಿಂದೂ ವಿರೋಧಿಗಳು ರೂಪಿಸುತ್ತಿದ್ದಾರೆ. ತನಿಖಾ ಸಂಸ್ಥೆಗಳೂ ಕೂಡ ಈ ಹತ್ಯೆಯ ಹಿಂದೆ ಯಾವುದೇ ಸಂಘಟನೆಯ ಕೈವಾಡ ಇಲ್ಲ ಎಂದು ಹೇಳಿದ್ದರು. ಸನಾತನ ಸಂಸ್ಥೆಯ ಮೇಲೆ ಆರೋಪ ಮಾಡುವುದು ಇದು ತನಿಖಾ ಸಂಸ್ಥೆಯ ಮೇಲೆ ಒತ್ತಡ ಹಾಕುವ ಮತ್ತು ತನಿಖೆಯ ದಿಶೆಯನ್ನು ಬದಲಿಸುವ ಷಡ್ಯಂತ್ರವೇ ಆಗಿದೆ.

ದೇಶದಲ್ಲಿ ಬಾಂಬ್ ಸ್ಪೋಟ, ಭಯೋತ್ಪಾದನೆ, ಮತಾಂತರ ಮುಂತಾದ ದೇಶ ವಿರೋಧಿ ಕೃತ್ಯ ಮಾಡುವ ಮತಾಂಧ ಸಂಘಟನೆಗಳ ಮೇಲೆ ನಿಷೇಧದ ಬೇಡಿಕೆಯನ್ನು ಯಾರು ಮಾಡುವುದಿಲ್ಲ. ಆದರೆ ರಾಷ್ಟ್ರ ಮತ್ತು ಧರ್ಮ ಕಾರ್ಯ ಮಾಡುವ ಸನಾತನ ಸಂಸ್ಥೆಯ ಮೇಲೆ ನಿಷೇಧದ ಬೇಡಿಕೆ ಇಡುವುದು ಖಂಡನೀಯವಾಗಿದೆ. ಬಂಧಿತ ಆರೋಪಿಗಳಿಗೆ ಸನಾತನ ಸಂಸ್ಥೆಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರೂ, ಕೆಲವು ಸ್ವಾರ್ಥಿ ರಾಜಕಾರಣಿಗಳು ಮಾತ್ರ ಸನಾತನ ಸಂಸ್ಥೆಯ ಅಪಪ್ರಚಾರ ಮಾಡುವುದು ಹಿಂದೂ ದ್ವೇಷದ ಪರಮಾವಧಿಯಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದ ಸನಾತನ ಸಂಸ್ಥೆಯ ಮೇಲಿನ ನಿಷೇಧದ ಬೇಡಿಕೆಯು ಅನ್ಯಾಯವಾಗಿದೆ ಮತ್ತು ಇದನ್ನು ಎಂದಿಗೂ ಸಹಿಸಲಾಗದು ಎಂದರು.

ಸನಾತನ ಸಂಸ್ಥೆಯ ಮೇಲೆ ನಿಷೇಧ ಹಾಕಿ ಹಿಂದುತ್ವದ ವಿಚಾರಧಾರೆಯನ್ನು ನಾಶಮಾಡುವ ಷಡ್ಯಂತ್ಯವನ್ನು ಖಂಡಿತ ವಿಫಲಗೊಳಿಸುವೆವು ಎಂಬ ಎಚ್ಚರಿಕೆಯನ್ನು ನೆರೆದಿದ್ದ ಹಿಂದುತ್ವನಿಷ್ಠರು ಸನಾತನ ಸಂಸ್ಥೆಯ ಪರವಾಗಿ ನೀಡಿದರು. ಪ್ರತಿಭಟನೆಯಲ್ಲಿ ಎಲ್ಲಾ ಹಿಂದೂಪರ ಸಂಘಟನೆಗಳು ಭಾಗವಹಿಸಿ ಸರಕಾರ ಹಾಗೂ ಎಡಪಂಥೀಯರು, ರಾಜ್ಯ ಸರಕಾರದ ವಿರುದ್ಧ ಜಯಘೋಷಗಳನ್ನು ಕೂಗಿದರು.

ಪ್ರತಿಭಟನೆಯ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷರಾದ ಜೀವನ್ ನೀರುಮಾರ್ಗ, ಹಿಂದೂ ಯುವಸೇನೆಯ ಮುಖಂಡರಾದ ಭಾಸ್ಕರ ಚಂದ್ರಶೆಟ್ಟಿ, ಹಿಂದೂ ಮುಖಂಡರಾದ, ಕೊಲ್ಯ ಮೂಕಾಂಬಿಕಾ ಕ್ಷೇತ್ರದ ಮೊಕ್ತೇಸರರಾದ  ಮಧುಸೂಧನ್ ಅಯ್ಯರ್, ಹಿಂದೂ ಮಹಾಸಭಾದ ಧರ್ಮೇಂದ್ರ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನ್ಯಾಯವಾದಿ ಉದಯ್ ಕುಮಾರ್ ಬಿ.ಕೆ, ಕಾನರ್ಪ ಚಿರಂಜೀವಿ ಯುವಕ ಮಂಡಲದ ಸಂಚಾಲಕರಾದ ಜಯರಾಜ ಸಾಲಿಯಾನ್, ಯುವ ಬ್ರಿಗೇಡ್ ನ ನರೇಶ್ ಶೆಣೈ, ಸೇವಾಂಜಲಿ ಟ್ರಸ್ಟ್ ನ ಹನುಮಂತ ಕಾಮತ್, ದುರ್ಗಾಸೇನೆಯ ಮಾಜಿ ಅಧ್ಯಕ್ಷೆ ವಿಜಯಶ್ರೀ, ಶ್ರೀಕ್ಷೇತ್ರ ಧರ್ಮಸ್ಥಳ ಸ್ವ ಸಹಾಯ ಸಂಘದ ಸೇವಾಪ್ರತಿನಿಧಿ ಸೀತಾರಾಮ ಆಳ್ವ ಮೊದಲಾದವರು ಉಪಸ್ಥಿತದ್ದರು.


Spread the love