Home Mangalorean News Kannada News ಸಮಾಜಕ್ಕಾಗಿ ಆರೋಗ್ಯಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಶಿಕ್ಷಕನ ಮೇಲಿದೆ ; ಬಿಷಪ್ ಜೆರಾಲ್ಡ್ ಲೋಬೊ

ಸಮಾಜಕ್ಕಾಗಿ ಆರೋಗ್ಯಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಶಿಕ್ಷಕನ ಮೇಲಿದೆ ; ಬಿಷಪ್ ಜೆರಾಲ್ಡ್ ಲೋಬೊ

Spread the love

ಸಮಾಜಕ್ಕಾಗಿ ಆರೋಗ್ಯಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಶಿಕ್ಷಕನ ಮೇಲಿದೆ ; ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಆರೋಗ್ಯಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕನ ಮೇಲಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಮಂಗಳವಾರ ಉಡುಪಿಯ ಡಾನ್ ಬಾಸ್ಕೊ ಹಾಲಿನಲ್ಲಿ ಆಯೋಜಿಸಿದ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಶಿಕ್ಷಣ ಸೋಸೈಟಿ ಇವರ ವತಿಯಿಂದ ಆಯೋಜಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಗಿಂತಲೂ ಗುರುವಿನ ಸ್ಥಾನ ಹಿರಿದು. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾದದ್ದು, ಶಿಕ್ಷಕರೆಂದರೆ ಇಂದಿನ ಪೀಳಿಗೆಗೆ ಒಂದು ವೃತ್ತಿಯಾಗಷ್ಟೇ ಸೀಮಿತವಾಗಿಬಿಟ್ಟಿದೆ. ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಅದರಲ್ಲಿ ಶಿಕ್ಷಕರೇ ಜೀವಾಳವಾಗಿರುತ್ತಾರೆ. ಯಾವುದೇ ಕ್ಷೇತ್ರದಲ್ಲಾದರೂ ಶಿಕ್ಷಕ ಇಲ್ಲದೇ ಅಭಿವೃದ್ಧಿ ಅಸಾಧ್ಯ. ಓರ್ವ ಶಿಕ್ಷಕ ದೇಶದ ರಾಷ್ಟ್ರಪತಿಯಾಗಿ ಮಾದರಿ ವ್ಯಕ್ತಿತ್ವವಾಗಿ ಹೊರಹೊಮ್ಮಲು ಸಾಧ್ಯ ಎಂಬುದಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಉತ್ತಮ ಉದಾಹರಣೆ. ಪ್ರಸ್ತುತ ಭಾರತದಲ್ಲಿ ಮೌಲ್ಯಾಧಾರಿತ ಶಿಕ್ಷಣ ಕಳೆಗುಂದುತ್ತಿರುವುದು ಮೌಲ್ಯಾಧಾರಿತ ಶಿಕ್ಷಕರ ಕೊರತೆಯನ್ನೂ ಎತ್ತಿ ಹಿಡಿಯುತ್ತಿದೆ!
ಈಗ ಶಿಕ್ಷಕ ಕೇವಲ ಶಿಕ್ಷಕನಾಗಿ ಉಳಿದಿಲ್ಲ, ರಾಜಕಾರಣ, ವ್ಯಾಪಾರ ಮತ್ತು ಜಾತಿವಾದವು ಶಿಕ್ಷಕನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಹೀಗಿರುವಾಗ ಮಾನಸಿಕವಾಗಿ ಸದೃಢವಾದ ಆರೋಗ್ಯಪೂರ್ಣ ಪ್ರಜೆಗಳು ಸಮಾಜದೊಳಕ್ಕಿಳಿಯಲು ಸಾಧ್ಯವಿಲ್ಲ. ಅಂತೆಯೇ ಶಿಕ್ಷಕ ದಿನಾಚರಣೆಯ ಮಹತ್ವ ಮಕ್ಕಳಲ್ಲಿ ಮೂಡುವುದು ಕೂಡ ಅಸಾಧ್ಯಮಾತು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಉಪನಿರ್ದೇಶಕರಾದ ಶೇಷಶಯನ ಕಾರಿಂಜ ಮಾತನಾಡಿ, ಸಮಾಜದಲ್ಲಿ ಶಿಕ್ಷಕರಿಗೆ ಪ್ರಥಮ ಸ್ಥಾನ ನೀಡುವ ಉನ್ನತ ಪರಂಪರೆ ನಮ್ಮದು. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಿದರೆ ಸಾಲದು ಅಂದು ಶಿಕ್ಷಕರನ್ನು ತಮ್ಮನ್ನೇ ತಾವು ಪರೀಕ್ಷೆಗೆ ಒಳಪಡಿಸುವ ದಿನವಾಗಿದೆ. ಶಿಕ್ಷಕ ವೃತ್ತಿಗೆ ಎಷ್ಟರ ಮಟ್ಟಿಗೆ ನ್ಯಾಯ ನೀಡಿದ್ದೇವೆ ಎನ್ನುವುದನ್ನು ಅವಲೋಕಿಸಲು ಸಿಕ್ಕಿರುವ ಒಂದು ಅವಕಾಶವೆ ಶಿಕ್ಷಕರ ದಿನಾಚರಣೆಯಾಗಿದೆ. ವಿದ್ಯಾರ್ಥಿಗಳನ್ನು ಪ್ರೀತಿಸುವುದರ ಮೂಲಕ ಸಮಾಜದ ಸಭ್ಯ ನಾಗರಿಕನ್ನಾಗಿ ರೂಪಿಸಿದಾಗ ಮಾತ್ರ ಒರ್ವ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟ ಶಾಲಾ- ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಶಿಕ್ಷಕರನ್ನು ಹಾಗೂ ಸಿಬಂದಿಗಳನ್ನು, ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ 100 ಫಲಿತಾಂಶ ದಾಖಲಿಸಿದ ಶಾಲೆಗಳನ್ನು, ಹಾಗೂ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಉಡುಪಿ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ ಸ್ವಾಗತಿಸಿ, ಕೆಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ ಧರ್ಮಪ್ರಾಂತ್ಯದ ಇದರ ಕಾರ್ಯದರ್ಶಿ ವಂ. ಡಾ. ಲೊರೇನ್ಸ್ ಡಿಸೋಜಾ ವಂದಿಸಿದರು. ವಿನಯ್ ಮತ್ತು ಹೆಲೆನ್ ಕರ್ನೇಲಿಯೋ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version