ಧರ್ಮಸ್ಥಳ: ಪರಮಾತ್ಮನನ್ನು ನಾವು ಬೇರೆ ಬೇರೆ ಹೆಸರಿನಿಂದ ಆರಾಧನೆ ಮಾಡಿದರೂ, ಎಲ್ಲಾ ಧರ್ಮಗಳ ಸಾರ ಒಂದೇ ಆಗಿದೆ. ನಮ್ಮಲ್ಲಿ ಯಾವುದೇ ರೀತಿಯ ಬೇಧ-ಭಾವ ಸಲ್ಲದು ಎಂದು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿಯವರು ಹೇಳಿದರು.
ಧರ್ಮಸ್ಥಳಕ್ಕೆ ಶನಿವಾರ ಪುರ ಪ್ರವೇಶ ಮಾಡಿದ ಪೂಜ್ಯ ಸ್ವಾಮೀಜಿದ್ವಯರನ್ನು ಮುಖ್ಯ ಪ್ರವೇಶದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿದ ಬಳಿಕ ಮಹೋತ್ಸವ ಸಭಾಭವನದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಜನರ ಸೇವೆಯೇ ದೇವರ ಸೇವೆ ಎಂಬ ಉದಾತ್ತ ಮನೋಭಾವದಿಂದ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಬಹುಮುಖಿ ಸಮಾಜ ಸೇವೆಯಿಂದ ಧರ್ಮಸ್ಥಳವು ಇಂದು ವಿಶ್ವವಿಖ್ಯಾತವಾಗಿದೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶೃಂಗೇರಿ ಕ್ಷೇತ್ರಕ್ಕೂ ಧರ್ಮಸ್ಥಳಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಅವರು ಸ್ಮರಿಸಿದರು. ಅವರ ಶಿಷ್ಯ ವಿಧುಶೇಖರ ಭಾರತೀ ಸ್ವಾಮೀಜಿಯವರು ಉಪಸ್ಥಿತರಿದ್ದರು.,
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್ ಹಾಗೂ ಡಿ ಹರ್ಷೇಂದ್ರ ಕುಮಾರ್ ಇದ್ದರು.