ಸಮಾಜದ ಶಾಂತಿ ಕಾಪಡುವಲ್ಲಿ ಪೊಲೀಸರ ಸೇವೆ ಅನನ್ಯ – ಜಿಲ್ಲಾಧಿಕಾರಿ ಜಿ ಜಗದೀಶ್
ಉಡುಪಿ: ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.
ಅವರು ಬುಧವಾರ ಜಿಲ್ಲಾ ಪರೇಡ್ ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಕರ್ತವ್ಯದ ಪಾಲನೆಯಲ್ಲಿಪ್ರಾಣ ಸಮರ್ಪಿಸಿದ ಪೊಲೀಸರ ಸ್ಮರಣೆಗೆ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಂತಹ ಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬರು ಮೊದಲಿಗೆ ನೆನಪಿಸುವುದು ಪೊಲೀಸರನ್ನಾಗಿದ್ದು ಎಂತಹ ಕಷ್ಟದ ಕೆಲಸವನ್ನು ಹೆದರದೆ ನಿರ್ವಹಿಸುವ ಪೊಲೀಸರ ಸೇವೆ ಅನನ್ಯವಾದುದು.
ಉಡುಪಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಪೊಲೀಸರು ಜಿಲ್ಲೆಯ ಗಡಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದುದರ ಪರಿಣಾಮ ವಿಪರೀತ ಮಟ್ಟಕ್ಕೆ ಹೋಗುವುದನ್ನು ತಪ್ಪಿಸಿದ್ದು ಇಲಾಖೆಯ ಕರ್ತವ್ಯಪ್ರಜ್ಞೆಯೊಂದಿಗೆ ಜಿಲ್ಲೆಯನ್ನು ಸೇಫ್ ಇರುವಂತೆ ನೋಡಿಕೊಂಡಿದ್ದಾರೆ ಅಲ್ಲದೆ ಇತ್ತೀಚೆಗೆ ಬಂದ ಮಹಾ ಮಳೆಯ ಸಂದರ್ಭದಲ್ಲಿ ಕೂಡ ಜೀವದ ಹಂಗು ತೊರೆದು ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಾವು ನೋವು ಉಂಟಾಗದಂತೆ ಸೇವೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಡ್ರಗ್ಸ್ ಮಹಾಮಾರಿಯನ್ನು ಹತ್ತಿಕ್ಕುವ ಕಾರ್ಯದಲ್ಲಿ ಜಿಲ್ಲಾ ಎಸ್ಪಿಯವರ ನೇತೃತ್ವದ ತಂಡ ಅತ್ಯುತ್ತಮ ಕೆಲಸ ಮಾಡುತ್ತಿದ್ದು ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯಾಗುವತ್ತ ಶ್ರಮ ವಹಿಸುತ್ತಿದ್ದಾರೆ ಎಂದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಮಾತನಾಡಿ, 1959ರ ಅ. 21ರಂದು ಚೀನಾ-ಭಾರತ ಗಡಿ ಭಾಗದ ಹಾಟ್ ಸ್ಟ್ರೀಗ್ ಪೋಸ್ಟ್ ಹತ್ತಿರ ಸಿಆರ್ಪಿಎಫ್ ಡಿಎಸ್ಪಿ ಕರಣಸಿಂಗ್ ನೇತೃತ್ವದಲ್ಲಿಪೊಲೀಸ್ ದಳವು ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಧುನಿಕ ಶಸ್ತಾ್ರಸ್ತ್ರಗಳನ್ನು ಹೊಂದಿರುವ ಚೀನಾ ಸೈನಿಕರಿಂದ ಏಕಾಏಕಿ ದಾಳಿ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿವೈರಿಗಳ ದಾಳಿಗೆ ವಿಚಲಿತರಾಗದೆ ತಮ್ಮ ಪ್ರಾಣದ ಹಂಗು ತೊರೆದು ಕೊನೆಯುಸಿರಿನವರೆಗೂ ಧೈರ್ಯದಿಂದ ಹೋರಾಡಿ ಪ್ರಾಣ ತೆತ್ತ 10 ಭಾರತೀಯ ಪೊಲೀಸ್ ಯೋಧರ ಬಲಿದಾನದ ಸ್ಮರಣೆ ಪ್ರತೀಕವಾಗಿ ಪ್ರತಿ ವರ್ಷ ಅ.21ರಂದು ದೇಶಾದ್ಯಂತ ಎಲ್ಲಜಿಲ್ಲಾಪೊಲೀಸ್ ಕೇಂದ್ರ ಸ್ಥಾನಗಳಲ್ಲಿಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿಆಂತರಿಕ ಶತ್ರುಗಳು ಹಾಗೂ ದೇಶ ವಿರೋಧಿ ಕೃತ್ಯಗಳನ್ನೆಸಗುವ ದುಷ್ಟರ ವಿರುದ್ಧ ಧೀರತನದಿಂದ ಹೋರಾಡಿ ಪ್ರಾಣ ಸಮರ್ಪಿಸಿದ ಪೊಲೀಸ್ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವುದರ ಮೂಲಕ ಈ ದಿನ ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಒಂದು ವರ್ಷದ ಅವಧಿಯಲ್ಲಿದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ ಒಟ್ಟು 264 ಪೊಲೀಸರು ಸೇವೆಯಲ್ಲಿಪ್ರಾಣಾರ್ಪಣೆ ಮಾಡಿದ್ದಾರೆ. ಇವರಲ್ಲಿಕರ್ನಾಟಕದ 17 ಧೀರ ಪೊಲೀಸರು ಸೇರಿದ್ದಾರೆ ಎಂದು ವಿವರಿಸಿದರು.
ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಮಾಜ ಸೇವಕರು, ಮಾಜಿ ಸೈನಿಕರು ಪುಷ್ಪಗುಚ್ಛ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್, ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ ಹಾಗೂ ಇತರರು ಉಪಸ್ಥೀತರಿದ್ದರು.
ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಗಾಳಿಯಲ್ಲಿಮೂರು ಸುತ್ತು ಗುಂಡು ಹಾರಿಸಿದ ನಂತರ ಮೌನಾಚರಣೆ ಮಾಡಲಾಯಿತು. ಉಡುಪಿ ವೃತ್ತ ನೀರಿಕ್ಷಕ ಮಂಜುನಾಥ್ ಅವರು ಕಾರ್ಯಕ್ರಮ ನಿರೂಪಿಸಿದರು.