ಸಮಾಜದ ಸಮಗ್ರ ಗ್ರಹಿಕೆಗೆ ಶಿಕ್ಷಣ ಅಗತ್ಯ: ಅರವಿಂದ ಚೊಕ್ಕಾಡಿ

Spread the love

ಸಮಾಜದ ಸಮಗ್ರ ಗ್ರಹಿಕೆಗೆ ಶಿಕ್ಷಣ ಅಗತ್ಯ: ಅರವಿಂದ ಚೊಕ್ಕಾಡಿ

ವಿದ್ಯಾಗಿರಿ: ಶಿಕ್ಷಣದ ನೆಲೆಯಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಉನ್ನತಿಯನ್ನ ಹೊಂದಲು ಸಾಧ್ಯ. ಜತೆಯಲ್ಲಿ ಹೆಣ್ಣಿನ ಸ್ವಾತಂತ್ರಕ್ಕೆ ಪ್ರಾಧಾನ್ಯತೆ ನೀಡುವ ಸಮಾಜ ನಿರ್ಮಾಣವಾಗಬೇಕು ಎಂಬುದು ನಾರಾಯಣಗುರುಗಳ ಆಶಯವಾಗಿತ್ತು ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮತ್ತು ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ‘’ಗುರುವಿನ ಅರಿವು- ವಿಶೇಷ ಉಪನ್ಯಾಸ ಮಾಲಿಕೆ 2019-20’’ರಲ್ಲಿ ‘ನಾರಾಯಣಗುರು- ಸಮಗ್ರತೆಯಅನ್ವೇಷಣೆ’ಯ ಕುರಿತು ಮಾತನಾಡಿದರು.

ಶಿಕ್ಷಣ ಕುಸಿತದಿಂದ ಸಮಾಜವು ಹತಾಶ ಸ್ಥಿತಿಯಲ್ಲಿತ್ತು. ಅಸಹನೀಯ ಜಾತಿಪದ್ಧತಿಗಳು ಸಮಾಜದಲ್ಲಿ ಉತ್ತುಂಗದಲ್ಲಿದ್ದವು. ಇಂತಹ ಅತ್ಯಂತ ಶೊಚನೀಯ ಕಾಲಘಟ್ಟದಲ್ಲಿ ಸಮಾಜ ಸುಧಾರಕರಾಗಿ ಬಂದವರು ನಾರಾಯಣ ಗುರುಗಳು. ಜಾತಿ ಸಮಸ್ಯೆಯನ್ನು ಹೋಗಲಾಡಿಸಲು ವಸತಿ ಶಾಲಾ ಶಿಕ್ಷಣ ಅಗತ್ಯ ಎಂದು ವಾದಿಸಿ, ಸಮಾಜದ ಸಮಗ್ರಗ್ರಹಿಕೆ ಪಡೆಯುವ ಶಿಕ್ಷಣದಲ್ಲಡಗಿದೆ ಪ್ರತಿಪಾದಿಸಿದ ಮಹಾನ್ ವ್ಯಕ್ತಿತ್ವ ಅವರದು ಎಂದರು.

ಶಿಕ್ಷಣದ ದೃಷ್ಟಿಯಿಂದ ಹಲವು ಕಾರ್ಯಗಳನ್ನು ನಿರ್ವಹಿಸಿದ ನಾರಾಯಣ ಗುರುಗಳು, ಪುರಾತನ ಜ್ಞಾನದ ಅಧ್ಯಯನಕ್ಕೆ ಸಂಸ್ಕøತ, ಆಧುನಿಕ ಜಗತ್ತಿನ ಅರಿವಿಗೆ ಇಂಗ್ಲಿಷ್ ಮತ್ತು ನಮ್ಮ ಅಸ್ತಿತ್ವವನ್ನು ದೃಢಪಡಿಸಲು ಮಾತೃಭಾಷೆ ಹೀಗೆ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ ವ್ಯಕ್ತಿತ್ವ ಅವರದು. ಅವರು ಶಿಕ್ಷಣದ ಮೂಲಕ ಸಾಮಾಜಿಕ ಚಿಂತನೆಯನ್ನು ನೀಡಿದ್ದಾರೆ. ಗುರುಗಳ ಹಲವು ಚಿಂತನೆಗಳು ಗಾಂಧೀಜಿಯ ಚಿಂತನೆಯನ್ನು ಹೋಲುತ್ತವೆ ಆದ್ದರಿಂದ ಇಂತಹ ಧೀಮಂತ ವ್ಯಕ್ತಿಯ ಆದರ್ಶಗಳ ಕುರಿತಾದ ಅನ್ವೇಷಣೆಯ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಕಾಲೇಜಿನ ಉಪಪ್ರಾಂಶುಪಾಲೆ ಪ್ರೋ. ಸುರೇಖಾ ರಾವ್ ಮಾತನಾಡಿ, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿ, ಸಮಾಜವನ್ನು ಸರಿದಾರಿಗೆ ತರುವುದು ಮುಖ್ಯ. ಅಂತಹ ಕಾರ್ಯವನ್ನು ನಿರ್ವಹಿಸಿದವರಲ್ಲಿ ನಾರಾಯಣ ಗುರುಗಳೂ ಒಬ್ಬರು. ಪ್ರಸ್ತುತಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಗಳನ್ನು ನೀಡಿದ ಆದರ್ಶ ವ್ಯಕ್ತಿತ್ವಗಳ ಕುರಿತು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಂಗಳಗಂಗೋತ್ರಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ಚಂದ್ರಶೇಖರ್ ಮಯ್ಯ ಸ್ವಾಗತಿಸಿ, ಪತ್ರಿಕೋದ್ಯಮ ವಿದ್ಯಾರ್ಥಿ ಗುಣೇಶ್ ವಂದಿಸಿ, ವೀಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love