ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನತೆಯ ಪಾತ್ರ ಹಿರಿದು- ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ‘ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನತೆಯ ಪಾತ್ರ ಮಹತ್ತರವಾದುದು. ಪ್ರತಿಭಾ ಸಂಪನ್ನ ಯುವಜನತೆ ಸಮುದಾಯದ ಬಹುದೊಡ್ಡ ಆಸ್ತಿ. ಅಂತಹ ಯುವಕರಲ್ಲಿ ಅಂತರ್ಗತವಾಗಿರುವ ಸಂಗೀತ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಾಗ ಸ್ವತಃ ಯುವಕರ ವ್ಯಕ್ತಿತ್ವ ಬೆಳೆಯುವುದು ಮಾತ್ರವಲ್ಲ ಅವರಿಂದ ಹೊರಮೊಮ್ಮುವ ಸಂಗೀತಾಭಿವ್ಯಕ್ತಿ ಜನತೆಯ ಮನತಣಿಸಿ ಮುದ ನೀಡುತ್ತದೆ. ಸಂಗೀತದ ಮೂಲಕ ಅನೇಕ ವಿಚಾರಧಾರೆಗಳು ಜನತೆ ತಲುಪಿಸುವುದು ಸುಲಭ ಸಾಧ್ಯವಾಗುತ್ತದೆ. ಅದು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ದಾರಿಯಾಗುತ್ತದೆ. ಈ ನೆಲೆಯಲ್ಲಿ ಶಾಂತಿ ಸ್ನೇಹ ಮತ್ತು ಸಾಮರಸ್ಯಕ್ಕಾಗಿ ಸಂಗೀತವೆಂಬ ವಿನೂತನ ಕಲ್ಪನೆಯಲ್ಲಿ ರೋಟರಿ ಜಿಲ್ಲೆ 3182ರ ವಲಯ 4 ‘ಯುವಧ್ವನಿ’ ಆಯೋಜಿಸಿದ ಸಂಗೀತ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ, ಸಹೋದರತೆ, ಸಹಬಾಳ್ವೆ, ಮಧುರ ಬಾಂಧವ್ಯಗಳು ನೆಲೆಗೊಳ್ಳಲು ಇದು ಪರಿಣಾಮಕಾರಿಯಾಗಿದೆ’ ಎಂದು ಕರ್ನಾಟಕ ಘನ ಸರಕಾರದ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಪ್ರಮೋದ ಮಧ್ವರಾಜ್ರವರು ಇಂದಿಲ್ಲಿ ಹೇಳಿದರು.
ಇಂದ್ರಾಳಿ ಪತ್ರಕರ್ತರ ಕಾಲೋನಿಯ ‘ಶ್ರೀಸವಾಸ್ಯಂ’ನಲ್ಲಿ ರೋಟರಿ ಜಿಲ್ಲೆ 3182, ವಲಯ 4ರ ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿಯವರ ಆತಿಥ್ಯದಲ್ಲಿ ನಡೆದ ಯುವ ಧ್ವನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಖ್ಯಾತ ಖಗೋಳ ತಜ್ಞರಾದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ| ಎ.ಪಿ. ಭಟ್ ದೀಪ ಪ್ರಜ್ವಲದೊಂದಿಗೆ ಯುವಧ್ವನಿಯನ್ನು ಶುಭಾರಂಭಗೊಳಿಸಿ, ಭೌತ ಶಾಸ್ತ್ರದ ಅನೇಕ ತತ್ವಗಳನ್ನು ಸಂಗೀತ ಕಲೆಯೊಂದಿಗೆ ಸಮೀಕರಿಸಿ ಅಧ್ಯಯನಗಳನ್ನು ಮಾಡಿದಾಗ ಅನೇಕ ಹೊಸ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲು ಸಾಧ್ಯ ಎಂದು ಹೇಳಿದರು.
ಉಡುಪಿಯ ಪ್ರಸಿದ್ಧ ಇಲೆಕ್ಟ್ರಾನಿಕ್ ಮಾಧ್ಯಮವಾಗಿರುವ ಯು ಚಾನಲ್ ಮಾಧ್ಯಮ ಪಾಲುದಾರಿಕೆಯಲ್ಲಿ ಮೂಡಿಬಂದ ‘ಯುವಧ್ವನಿ’ಯಲ್ಲಿ ಉಡುಪಿಯ ಖ್ಯಾತ ಸಂಗೀತ ಗುರು ವಿದ್ವಾನ್ ಮಧೂರು ಬಾಲ ಸುಬ್ರಹ್ಮಣ್ಯಂ ಗುರುಸಂದೇಶ ನೀಡಿ ಯುವ ಕಲಾವಿದರನ್ನು ಹುರಿದುಂಬಿಸಿದರು. ರೋಟರಿ ಉಡುಪಿ ಅಧ್ಯಕ್ಷರಾದ ಡಾ| ಸುರೇಶ ಶೆಣೈ ಆಶಯ ನುಡಿಗಳನ್ನು ವ್ಯಕ್ತಪಡಿಸಿದರು. ರೋಟರಿ ಜಿಲ್ಲೆ 3182ರ ಜಿಲ್ಲಾ ಸಭಾಪತಿಗಳಾದ ಎಚ್.ಎನ್.ಎಸ್. ರಾವ್ (ಆ್ಯನ್ವಲ್ ಗಿವಿಂಗ್) ಕರುಣಾಕರ ಶೆಟ್ಟಿ (ವೊಕೇಶನಲ್ ಅವಾರ್ನೆಸ್) ಮಂಜುನಾಥ ಉಪಾಧ್ಯ (ರೋಟರಿ ಪಬ್ಲಿಕ್ ಇಮೇಜ್) ಮತ್ತು ಸತ್ಯೇಂದ್ರ ಪೈ (ಆರ್.ಐ.ಕಾನ್ವೆಶನ್ ಪ್ರಮೋಶನ್ ಸಮಿತಿ) ಶುಭಾಶಂಸನೆಗೈಯ್ದರು.
ಉದಯೋನ್ಮುಖ ಯುವ ಸಂಗೀತ ಪ್ರತಿಭೆಗಳಾದ ಸೂರಜ್ ಶೆಣೈ ಉಡುಪಿ, ಉಡುಪಿ ಶ್ರವಣ್ ಎಸ್. ಬಾಸ್ರಿ, ವಿನಯ ಭಟ್ ಮಂಗಳೂರು, ಚೇತನ್ ನಾಯಕ್ ಉಡುಪಿ, ಸಂಪ್ರೀತ್ ಉಡುಪಿ, ಪ್ರಸಾದ್ ಶೆಣೈ ಉಡುಪಿ, ರಜತ್ ಮಯ್ಯ ಉಜಿರೆ, ಡಾ| ಅಭಿಷೇಕ್ ರಾವ್ ಕೊರಡ್ಕಲ್, ಕು| ಸುಪ್ರಭಾ ಕಲ್ಕೂರ್, ಕುಂಜಿಬೆಟ್ಟು ಸಂಗಿತ ವಾದ್ಯ ಗೋಷ್ಠಿ ಮತ್ತು ಸುಗಮ ಸಂಗೀತ ನಡೆಸಿಕೊಟ್ಟರು. ಕೊನೆಯಲ್ಲಿ ಉಡುಪಿ ಶ್ರಾವ್ಯಾ ಎಸ್. ಬಾಸ್ರಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಪ್ರಸಿದ್ಧ ಹಿರಿಯ ಸಂಗೀತ ಕಲಾವಿದರುಗಳಾದ ವಿದ್ವಾನ್ ಬಾಲಚಂದ್ರ ಭಾಗವತ (ಮೃದಂಗ) ವಿದ್ವಾನ್ ಶ್ರೀಧರ ಆಚಾರ್ಯ ಪಾಡಿಗಾರು (ವಯಲಿನ್) ಮತ್ತು ವಿದ್ವಾನ್ ದಿನೇಶ ಶೆಣೈ ಪಾಂಗಾಳ (ತಬಲಾ) ವಿಶೇಷ ವಾದನ ಸಹಕಾರ ನೀಡಿದರು. ರೋಟರಿ ಜಿಲ್ಲೆ 3182ರ ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ಪ್ರಸ್ತಾಪಿಸಿ ಸ್ವಾಗತಿಸಿದರು. ಯುವಧ್ವನಿಗೆ ವೇದಿಕೆ ವಿನ್ಯಾಸಗೊಳಿಸಿದ ಗಣೇಶ ರಾವ್ ಎಲ್ಲೂರು ವಂದಿಸಿದರು.