Home Mangalorean News Kannada News ಸಮಾಜ ಗಾಂಧಿಜಿಯನ್ನು ಐಕಾನ್ ಆಗಿ ಸ್ವೀಕರಿಸಿದೆ ವಿನಃ ಅವರ ಆದರ್ಶ ಪಾಲಿಸುತ್ತಿಲ್ಲ – ಅಣ್ಣಾಮಲೈ

ಸಮಾಜ ಗಾಂಧಿಜಿಯನ್ನು ಐಕಾನ್ ಆಗಿ ಸ್ವೀಕರಿಸಿದೆ ವಿನಃ ಅವರ ಆದರ್ಶ ಪಾಲಿಸುತ್ತಿಲ್ಲ – ಅಣ್ಣಾಮಲೈ

Spread the love

ಸಮಾಜ ಗಾಂಧಿಜಿಯನ್ನು ಐಕಾನ್ ಆಗಿ ಸ್ವೀಕರಿಸಿದೆ ವಿನಃ ಅವರ ಆದರ್ಶ ಪಾಲಿಸುತ್ತಿಲ್ಲ – ಅಣ್ಣಾಮಲೈ

ಕುಂದಾಪುರ: ಸಮಾಜದಲ್ಲಿ ಭಾವನಾತ್ಮಕ ಸಂಬಂಧ ಕಳೆಗುಂದುತ್ತಿದ್ದು, ಸಾಮರಸ್ಯಕ್ಕೂ ಧಕ್ಕೆ ತರುತ್ತಿದೆ. ಗಾಂಧಿ ಜೀ ಅವರನ್ನು ಐಕಾನ್ ಆಗಿ ಸ್ವೀಕರಿಸಿದ್ದಾರೆಯೇ ವಿನಃ ಅವರ ಆದರ್ಶಗಳ ಪಾಲನೆ ಆಗುತ್ತಿಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿಷಾದ ವ್ಯಕ್ತಪಡಿಸಿದರು.

ಅವರು ಶನಿವಾರ ಕುಂದಾಪುರದ ಕಾರ್ಟೂನ್ ಬಳಗ ಆಶ್ರಯದಲ್ಲಿ ಇಲ್ಲಿನ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾರ್ಟೂನ್ ಹಬ್ಬದಲ್ಲಿ “ಗಾಂಧೀಜಿ 150 ನೇ ವರ್ಷಾಚರಣೆಯ ಈಶ್ವರ ಅಲ್ಲಾ ತೇರೋ ನಾಮ್” ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ಗಾಂಧೀಜಿ ವಿಚಾರಧಾರೆಯ ದಿಕ್ಕು ಬದಲಾಗುತ್ತಿದೆ. ಕೋಮು ಸಾಮರಸ್ಯ, ಅಸ್ಪøಶ್ಯತೆ, ಸ್ವಚ್ಛತೆ ಗಾಂಧಿ ಕನಸಾಗಿದ್ದು, ಅವರ ವಿಚಾರಧಾರೆ ನಾವು ಸರಿಯಾಗಿ ಅರ್ಥೈಸಿಕೊಳ್ಳದಿರುವುದೇ ಸಮಸ್ಯೆ ಮೂಲ ಎಂದವರು ಅಭಿಪ್ರಾಯಪಟ್ಟರು.

ಗಾಂಧಿಜೀ ಅವರ ಆಶಯ ಹೆಣ್ಣುಮಕ್ಕಳು ಸ್ವತಂತ್ರವಾಗಿ ಓಡಾಡಬೇಕು ಎನ್ನುವುದು. ಗಾಂಧೀಜಿ 150 ವರ್ಷದ ನಂತರವೂ ಮಹಿಳೆಯ ಶಕ್ತಿ ಅನಾವರಣ ಕೇವಲ 50ರಷ್ಟಾಗಿದೆ. ಮೀಸಲಾತಿ, ರಾಜಕೀಯ ಮೀಸಲಾತಿಯಿಂದ ಯಾರನ್ನೂ ಮೇಲೆತ್ತಲು ಸಾಧ್ಯವಿಲ್ಲ. ಮಹಿಳೆಯರ ಬಗ್ಗೆ ಸಿಂಪತಿ ಬೇಡ. ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ, ನಡುರಾತ್ರಿಯಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡುವ ಗಾಂಧೀಜಿಯವರ ಯೋಚನೆಗೆ ಶಕ್ತಿ ಸಿಕ್ಕಂತಾಗುತ್ತದೆ. ಮಹಿಳಾ ಶಕ್ತಿ ಅನಾವರಣವಾಗಬೇಕು. ಸ್ವಚ್ಛತೆ ಎಲ್ಲರ ಗುರಿಯಾಗಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆಯಿದ್ದು, ಅದನ್ನು ಎಚ್ಚರಿಸಿಕೊಂಡು ಸ್ವಪ್ರಯತ್ನದಿಂದ ಎದ್ದೇಳುವ ಪ್ರಯತ್ನ ಮಾಡಿದರೆ ಸಾಧನೆ ಮೆಟ್ಟಿಲೇರಲು ಸಾಧ್ಯ ಎಂದರು.

ಕಾರ್ಟೂನ್ ಹಬ್ಬದ ಉದ್ಘಾಟನೆಯನ್ನು ನೆರವೇರಿಸಿದ ಖ್ಯಾತ ನಿದೇರ್ಶಕ ಹಾಗೂ ನಟ ರಿಷಬ್ ಶೆಟ್ಟಿ ಮಾತನಾಡಿ ನಾವು ಹೋದಲ್ಲೆಲ್ಲಾ ನಮ್ಮ ಭಾಷೆಯನ್ನು ಕೇಳಿ ರೇಗಿಸುವವರೆ ಹೆಚ್ಚು. ನಮ್ಮ ಮಾತಿನಿಂದಲೇ ನಾವು ಎಲ್ಲರನ್ನೂ ನಗಿಸುತ್ತೇವೆ. ಹಾಗೆಯೇ ಮೊನಚಾದ ರೇಖೆಯ ಮೂಲಕ ನಮ್ಮೂರಿನ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಎಲ್ಲರನ್ನೂ ನಗಿಸುತ್ತಿದ್ದಾರೆ. ಸತೀಶ್ ಆಚಾರ್ಯ ಅವರು ರಚಿಸುವ ಕಾರ್ಟೂನುಗಳನ್ನು ಆಗಾಗೆ ನೋಡಿ ನಗುತ್ತಲೇ ಇರುತ್ತೇನೆ. ನಾವು ಬ್ರಿಟೀಷ್ ಶಿಕ್ಷಣ ಪದ್ದತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಮಕ್ಕಳು ಜೀವನ ಹೇಗೆ ಎನ್ನುವುದುನ್ನು ಕಲಿಯುತ್ತಿದ್ದರು. ಆದರೆ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಇಂದು ಇಲ್ಲ. ಈ ವ್ಯವಸ್ಥೆ ಮತ್ತೆ ವಾಪಾಸಾದರೆ ಮಾತ್ರ ನಾವು ನಮ್ಮ ತನವನ್ನು ಉಳಿಸಿಕೊಳ್ಳಬಹುದು ಎಂದರು.

ರಾಜಕೀಯವನ್ನು ಟೀಕಿಸಿ ಕಾರ್ಟೂನು ಬರೆದಾಗ ಕಾರ್ಟೂನಿಸ್ಟರ ಮೇಲೆ ದಾಳಿ ನಡೆಯುತ್ತದೆ. ಆದರೆ ಅದನ್ನು ಅಲ್ಲಿಯೇ ಬಿಟ್ಟು ಮುಂದಕ್ಕೆ ಸಾಗಬೇಕು. ಟೀಕಿಸುವವರು ಟೀಕಿಸುತ್ತಲೇ ಇರುತ್ತಾರೆ. ಅದರಿಂದ ಕಾರ್ಟೂನಿಸ್ಟರಿಗೆ ಪ್ರಚಾರ ಸಿಕ್ಕಿ ತಾವು ರಚಿಸಿದ ಕಾರ್ಟೂನು ಅನೇಕ ಜನರಿಗೆ ತಲುಪುವಂತಾಗುತ್ತದೆ.

ಮಣಿಪಾಲ ಗಾಂಧೀಜಿ ಅಧ್ಯಯನ ಕೇಂದ್ರ ನಿರ್ದೇಶಕ ಪ್ರೋ. ವರದೇಶ ಹಿರೇಗಂಗೆ, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿದರು.

ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ವ್ಯಂಗ್ಯ ಚಿತ್ರ ಕಲಾವಿದರಾದ ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಸನ್ಮಾನಕ್ಕೆ ಸಹಕರಿಸಿದರು. ಪತ್ರಕರ್ತ ಅವಿನಾಶ್ ಕಾಮತ್ ಸ್ವಾಗತಿಸಿ, ನಿರೂಪಿಸಿದರು. ಹವ್ಯಾಸಿ ಕಾರ್ಟೂನಿಸ್ಟ್ ರಾಮಕೃಷ್ಣ ಹೇರ್ಳೆ ವಂದಿಸಿದರು.

ಮಧ್ಯಾಹ್ನ ಮಾಯಾ ಕಾಮತ್ ಸ್ಮರಣಾರ್ಥ ಉಡುಪಿ, ದ.ಕ. ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಸ್ಪರ್ಧೆ ನಡೆಯಿತು. 5ನೇ ತರಗತಿವರೆಗಿನ ಮಕ್ಕಳಿಗೆ ಗಾಂಧೀಜಿ ಚಿತ್ರ ಬಿಡಿಸುವ ಸ್ಪರ್ಧೆ, 6 ರಿಂದ ಕಾಲೇಜು ತನಕದ ಮಕ್ಕಳಿಗೆ ಗಾಂಧೀಜಿ ಈಶ್ವರ ಅಲ್ಲಾ ತೇರೋ ನಾಮ್ (ಕೋಮು ಸಾಮರಸ್ಯ) ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು.

ಕನ್ನಡ ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ವಿದ್ಯಾರ್ಥಿಗಳೇ ವಿಶೇಷವಾಗಿ ಅಭಿನಂದಿಸಿದರು. ಕುಂದಾಪುರದ ಕನ್ನಡ ಮಾಧ್ಯಮ ನಾಲ್ಕು ಶಾಲೆ ಮಕ್ಕಳು ಬೆಳಗ್ಗೆಯೇ ತಮ್ಮ ಶಿಕ್ಷಕರ ಜೊತೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. ಕಾರ್ಯಕ್ರಮ ಆರಂಭವಾದ ನಂತರ ರಿಷಬ್ ಶೆಟ್ಟಿ ಅಭಿನಂದನೆ ಅವಕಾಶ ಮಾಡಿಕೊಡಲಾಯಿತು. ನಾಲ್ಕು ಶಾಲೆಗಳಿಂದ ಇಬ್ಬರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಗಮಿಸಿದ್ದು, ಒಬ್ಬ ವಿದ್ಯಾರ್ಥಿ ರಿಷಬ್ ಶೆಟ್ಟಿ ಅವರಿಗೆ ಗುಲಾಬಿ ಕೊಟ್ಟು ಅಭನಂದಿಸಿದರೆ, ಮತ್ತೊಬ್ಬ ವಿದ್ಯಾರ್ಥಿ ಶುಭಾಶಯ ಬರೆಯುವ ಮೂಲಕ ಅಭಿನಂದಿಸಿದರು.

ಹಿರಿಯ ವ್ಯಂಗ್ಯ ಚಿತ್ರಗಾರರಾದ ವಿ.ಜಿ. ನರೇಂದ್ರ, ಸುರೇಂದ್ರ, ಪವರ್ಲಿಪ್ಟರ್ ವಿಶ್ವನಾಥ ಗಾಣಿಗ ಅವರನ್ನು ಸಮ್ಮಾನಿಸಲಾಯಿತು


Spread the love

Exit mobile version