ಸಮಾನ ಮನಸ್ಕ ಯುವಜನರ ಪ್ರಯತ್ನ ಬಡ ನಿರ್ಗತಿಕರ ರಕ್ಷಣೆಗೆ ಸಮರ್ಪಣ

Spread the love

ಸಮಾನ ಮನಸ್ಕ ಯುವಜನರ ಪ್ರಯತ್ನ ಬಡ ನಿರ್ಗತಿಕರ ರಕ್ಷಣೆಗೆ ಸಮರ್ಪಣ

ಉಡುಪಿ: ಹಾದಿಬೀದಿಯಲ್ಲಿ ಸುತ್ತಾಡುವ ಬಡ ನಿರ್ಗತಿಕರ ರಕ್ಷಣೆ ಮತ್ತು ಹಾರೈಕೆಗಾಗಿ ನೂತನ ಎಂಜಿಒ `ಸಮರ್ಪಣ’ ಭಾನುವಾರ ನಗರದ ಆಶಾ ನಿಲಯ ಶಾಲೆಯಲ್ಲಿ ಪ್ರಾರಂಭಗೊಂಡಿತು. ಹಿಂದಿ ಝೀ ವಾಹಿನಿಯ ಸರಿಗಮಪ ಜೂನಿಯರ್ ವಿಭಾಗದಲ್ಲಿ ವಿಜೇತರಾಗಿದ್ದ ಪುತ್ತೂರಿನ ಗಗನ್ ಜಿ.ಗಾಂವ್ಕರ್ ಉದ್ಘಾಟಿಸಿದರು.

ಸಂಸ್ಥೆಯನ್ನು ಉದ್ಘಾಟಿಸಿ, ಸಂಸ್ಥೆಯ ಹುಟ್ಟಿನ ದಿನದಂಗವಾಗಿ ಕೇಕ್ ಕತ್ತರಿಸಿ ವಿಶೇಷ ಮಕ್ಕಳಿಗೆ ಕೇಕ್ ತಿನ್ನಿಸಿ ಮಾತನಾಡಿದ ಗಗನ್, ನನಗೆ ವಿಶೇಷ ಶಾಲೆಯ ಮಕ್ಕಳು ಸಹೋದರ ಸಹೋದರಿಯರಿದ್ದ ಹಾಗೆ, ಇಂತಹ ಶಾಲೆಯಲ್ಲಿ ನಡೆದ ಸಮರ್ಪಣ ಕಾರ್ಯಕ್ರಮ ಮರೆಯಲಾರದ ಅನುಭವ ಎಂದು ಸಮರ್ಪಣ ಸಂಸ್ಥೆಗೆ ಶುಭಹಾರೈಸಿ ಆಶಾನಿಲಯ ಸಂಸ್ಥೆಗೆ 5ಸಾವಿರ ರೂಪಾಯಿ ಸಹಾಯಧನ ನೀಡಿದರು. ಇದು ಸಮರ್ಪಣಾ ಸಂಸ್ಥೆಯ ಉದ್ಘಾಟನೆ ದಿನದ ಸಮರ್ಪಣೆ ದಿನದಂತಾಗಿತ್ತು.

ಉದ್ಘಾಟನೆ ಬಳಿಕ ಗಗನ್ ಹಿಂದಿ ಹಾಗೂ ಕನ್ನಡ ಹಾಡುಗಳನ್ನು ಹಾಡುವ ಮೂಲಕ ನೆರೆದ ಮಕ್ಕಳನ್ನು ರೋಮಾಂಚನಗೊಳಿಸಿದರು. ಇದೇ ಸಂಧರ್ಭ ಈ ಸಮರ್ಪಣಾ ಕಾರ್ಯಕ್ರಮಕ್ಕೆಂದೇ ಮಂಗಳೂರಿನಿಂದ ಆಗಮಿಸಿದ ಮ್ಯುಸಿಷಿಯನ್ ರುಬಿನ್ ಮಚಾಡೋ ಮೌತಾರ್ ಗನ್ ಹಾಗೂ ಗಿಟಾರ್ ಮೂಲಕ ನೆರೆದವರನ್ನು ಮನರಂಜಿಸಿದರು. ಇದಕ್ಕೆ ವಿಶೇಷ ಮಕ್ಕಳು ಸ್ಟೆಪ್ ಹಾಕಿ ಕುಣಿದು ಸಂತಸಪಟ್ಟರು ಇದು ಸಮರ್ಪಣಾ ಸಂಸ್ಥೆಯ ಉದ್ಘಾಟನೆ ಯಶಸ್ಸಿಗೆ ಕಾರಣವಾಗಿತ್ತು.

ಕಾರ್ಯಕ್ರಮದಲ್ಲಿ ಆಶಾ ನಿಲಯ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗ್ನೇಸ್ ಹೇಮಾವತಿ, ಉದ್ಯಮಿ ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಮರ್ಪಣಾ ಸಂಸ್ಥೆಯ ಸಂಸ್ಥಾಪಕರಾದ ಪರೀಕ್ಷಿತ್ ಶೇಟ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರೆ, ಸಮರ್ಪಣಾ ಸಂಸ್ಥೆಯ ಹುಟ್ಟಿಗೆ ಕಾರಣರಾದ ಪ್ರವಲಿಕ ವಂದಿಸಿದರು. ಸಮರ್ಪಣಾ ಸಂಸ್ಥೆಯ ಸದಸ್ಯರಾದ ಕೃಪಾ, ಎರಿಕ್, ರೋಹಿತ್, ಯೋಗಾ, ಅಕ್ಷಯ್, ವೈಶಾಕ್ ಸಹಕರಿಸಿದರು.


Spread the love