ಸಮುದ್ರ ಗಸ್ತು ಬೋಟುಗಳ ಬಳಕೆಯ ಇಂಧನ ಮಿತಿ ಕಡಿಮೆ – ಸತ್ಯಕ್ಕೆ ದೂರವಾದ ಸುದ್ದಿ
ಉಡುಪಿ: ದೃಶ್ಯ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪ್ರಿಂಟ್ ಮಾಧ್ಯಮಗಳಲ್ಲಿ ಫೆಬ್ರವರಿ 14 ರಂದು ಕರಾವಳಿ ಕಾವಲು ಪಡೆಯ ಸಮುದ್ರ ಗಸ್ತು ಬೋಟುಗಳ ಬಳಕೆಯ ಇಂಧನ ಮಿತಿಯನ್ನು ಶೇಕಡ 50 ರಷ್ಟು ಕಡಿಮೆ ಮಾಡಲಾಗಿದೆ ಎಂದು ಪ್ರಸಾರವಾಗುತ್ತಿರುವ ಮಾಧ್ಯಮ ಪ್ರಕಟಣೆಯು ಸತ್ಯಕ್ಕೆ ದೂರವಾಗಿರುತ್ತದೆ. ಈ ರೀತಿಯ ಯಾವುದೇ ಆದೇಶವನ್ನು ಸರ್ಕಾರ/ಪೊಲೀಸ್ ಇಲಾಖೆ ಹೊರಡಿಸಿರುವುದಿಲ್ಲ.
ಸಮುದ್ರ ಗಸ್ತು ಬೋಟುಗಳಿಗೆ ಸಂಬಂಧಿಸಿದಂತೆ ಯಾವುದೇ ಇಂಧನ ಮಿತಿ ನಿರ್ದಿಷ್ಟಪಡಿಸಿರುವುದಿಲ್ಲ. ಇಲಾಖಾ ಬೋಟುಗಳಿಗೆ ಇಂಧನ ವೆಚ್ಚಕ್ಕಾಗಿ ಸರ್ಕಾರವು ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡುತ್ತಿದೆ. ಮತ್ತು ನಿರಂತರವಾಗಿ ಸಮುದ್ರದಲ್ಲಿ ಗಸ್ತು ಕರ್ತವ್ಯ ನಡೆಸಲಾಗುತ್ತಿರುತ್ತದೆ.
ಮುಂದುವರೆದು, ಇಲಾಖಾ ವಾಹನಗಳಿಗೆ ಅಧಿಕಾರಿಗಳ ಕೋರಿಕೆಯ ಮೇರೆಗೆ, ಅವಶ್ಯಕತೆಯ ಆಧಾರದ ಮೇಲೆ ಹೆಚ್ಚುವರಿ ಇಂಧನ ಬಳಸಲು ಸಹ ಅನುಮತಿ ನೀಡಲಾಗುತ್ತಿದೆ. ಆಂತರಿಕ ಭದ್ರತೆಗೆ ಸಂಬAಧಿಸಿದ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ನಿಖರವಾದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಖಾತ್ರಿ ಪಡಿಸಿಕೊಂಡು ನಂತರ ಪ್ರಸಾರ ಮಾಡುವಂತೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.