ಸರಕಾರದ ಅನುದಾನದಿಂದ ಫಲಾನುಭವಿಗಳು ಅಭಿವೃದ್ಧಿ ಹೊಂದುವ ಸಂಕಲ್ಪ ಮಾಡಬೇಕು : ಶಾಸಕ ಜೆ ಆರ್ ಲೋಬೊ

Spread the love

ಸರಕಾರದ ಅನುದಾನದಿಂದ ಫಲಾನುಭವಿಗಳು ಅಭಿವೃದ್ಧಿ ಹೊಂದುವ ಸಂಕಲ್ಪ ಮಾಡಬೇಕು : ಶಾಸಕ ಜೆ ಆರ್ ಲೋಬೊ

ಮಂಗಳೂರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ನಗರದ ಪುರಭವನದಲ್ಲಿ ನಿಗಮದ ವಿವಿಧ ಯೋಜನೆಗಳಡಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳ ಸಾಲ ಸೌಲಭ್ಯ ವಿತರ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಸ್ವಯಂ ಉದ್ಯೋಗ, ಶ್ರಮಶಕ್ತಿ, ಮೈಕ್ರೋ ಕಿರುಸಾಲ, ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಒಟ್ಟು 801 ಫಲಾನುಭವಿಗಳೀಗೆ ರೂ 225.14 ಲಕ್ಷ ಸಾಲ, ಸಹಾಯಧನ ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸಿದಾಗ ಆಗುವ ಸಂತೋಷಕ್ಕಿಂತ ಮತ್ತೊಂದಿಲ್ಲ. ಸರಕಾರದ ಯೋಜನೆಗಳನ್ನು ಜನಪ್ರತಿನಿಧಿಯಾಗಿದ್ದ ವ್ಯಕ್ತಿ ನೇರವಾಗಿ ಫಲಾನುಭವಿಗೆ ಮುಟ್ಟಿಸಿದಾಗ ಮಾತ್ರ ಆ ಯೋಜನೆಯ ಮಹತ್ವ ಏನು ಎನ್ನುವುದು ತಿಳಿಯುತ್ತದೆ. ರಾಜ್ಯದಲ್ಲಿ 17% ಅಲ್ಪಸಂಖ್ಯಾತರಿದ್ದರೆ ಅವರಿಗೆ ದೇಶದ ಯಾವುದೇ ರಾಜ್ಯ ಸರಕಾರ ನೀಡದಷ್ಟು ಅನುದಾನ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀಡಿದೆ. ಅಲ್ಪಸಂಖ್ಯಾತರಿಗಾಗಿ 2750 ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಸರಕಾರ ಕಳೆದ ವರ್ಷದ ಬಜೆಟಿನಲ್ಲಿ ನೀಡಿದೆ. 85% ಇರುವ ಮುಸ್ಲಿಂ ಅಲ್ಪಸಂಖ್ಯಾತರಿಗೆ, ಪ್ರಥಮ ಆದ್ಯತೆಯಾಗಿರುವುದು ಶಿಕ್ಷಣ ನೀಡುವುದು.

ಪ್ರತಿಯೊಬ್ಬ ಅಲ್ಪಸಂಖ್ಯಾತರೂ ಕೂಡ ವಿದ್ಯಾಭ್ಯಾಸ ಪಡೆಯಬೇಕು ಎನ್ನುವ ಉದ್ದೇಶದಿಂದ ರಾಜ್ಯದಾದ್ಯಂತ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಹಾಸ್ಟೆಲ್ ತೆರೆದು ಅದರ ಮೂಲಕ ವಿದ್ಯಾಭ್ಯಾಸ ನೀಡುವುದರೊಂದಿಗೆ ಉಚಿತ ವಸತಿ ಊಟವನ್ನು ಕೂಡ ನೀಡುವುದರೊಂದಿಗೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ. ಪಿಯುಸಿ ಬಳೀಕ ಯಾವುದೇ ತಾಂತ್ರಿಕ ವಿದ್ಯಾಭ್ಯಾಸ ಪಡೆಯಲು ಅರಿವು ಯೋಜನೆಯನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪ್ರವೇಶ ಪಡೆಯುವ ಮೊದಲೇ 20 ಕೋಟಿ ಹಣವನ್ನು ಸಿಇಟಿಗೆ ಪಾವತಿ ಮಾಡುತ್ತದೆ.  ಇದರಿಂದ ಸಾವಿರಾರು ವಿದ್ಯಾರ್ಥಿಗಳೂ ದೇಶ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ ಎಂದರು. ಇಷ್ಟೊಂದು ಮಟ್ಟದಲ್ಲಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆಯಲು ಸಾಧ್ಯವಾದರೆ ಅದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ನಿಗಮ ಎನ್ನುವುದನ್ನು ಮರೆಯಬಾರದು.

ಸಾಲಸೌಲಭ್ಯವನ್ನು ಪಡೆಯಲು ಯಾವುದೇ ರೀತಿಯ ಮಧ್ಯವರ್ತಿಗಳಿಲ್ಲ ಬದಲಾಗಿ ಮಂಜೂರಾಗುವ ಸಾಲವು ನೇರವಾಗಿ ಫಲಾನುಭವಿಯ ಖಾತೆಗೆ ಜಮಾವಣೆ ಆಗುತ್ತದೆ ಇದರಿಂದ ಪಾರದರ್ಶಕತೆ ಕಾಪಾಡಲು ಸಾಧ್ಯವಿದೆ.  ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆಯ ಮಾಹಿತಿಯನ್ನು ನೀಡುವ ಕೆಲಸವನ್ನು ಇಲಾಖೆಯ ಮುಖಾಂತರ ಮಾಡಿದ್ದು ಹೆಚ್ಚು ಹೆಚ್ಚು ಅರ್ಜಿಗಳು ಬರುತ್ತಿದ್ದು ಸೂಕ್ತ ವ್ಯಕ್ತಿಗಳಿಗೆ ಸಹಾಯಧನ ನೀಡಲು ಇಲಾಖೆ ಕ್ರಮ ಕೈಗೊಂಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಜೆ ಆರ್ ಲೋಬೊ ಅವರು ಮಾತನಾಡಿ ಸರಕಾರ ಸದಾ ನಮಗೆ ನೆರವು ನೀಡುತ್ತದೆ ಆದರೆ ನಾವು ಅದರಿಂದ ಅಭಿವೃದ್ಧಿ ಹೊಂದುತ್ತೇವೆ ಎಂಬುದರ ಕುರಿತು ನಮ್ಮಲ್ಲೇ ನಾವು ಸಂಕಲ್ಪ ಕೈಗೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ. ಸರಕಾರ ನಮಗೆ ಯಾಕೆ ಸಹಾಯ ಮಾಡುತ್ತದೆ ಮತ್ತು ಅದನ್ನು ಪಡೆದ ಬಳಿಕ ನಾನೇನು ಮಾಡಬೇಕು ಎನ್ನುವುದುನ್ನು ಪ್ರತಿಯೊಬ್ಬ ಫಲಾನುಭವಿ ಆಲೋಚಿಸಬೇಕಾಗಿದೆ. ಸರಕಾರ ಒಳ್ಳೆಯ ಉದ್ದೇಶದಿಂದ ನೀಡದ ಹಣದ ಸದುಪಯೋಗ ಮಾಡುವ ಜವಾಬ್ದಾರಿ  ಫಲಾನುಭವಿಯ ಮೇಲಿದೆ. ಸರಕಾರ ಒಳ್ಳೆಯ ಯೋಜನೆಗಳನ್ನು ರೂಪಿಸುತ್ತದೆ ಆದರೆ ಅದನ್ನು ಇಲಾಖೆ ಮಂಜೂರು ಮಾಡುವಲ್ಲಿ ವಿಳಂಬ ಮಾಡಿದರೆ ಸಮಸ್ಯೆಯಾಗುತ್ತದೆ. ರಾಜ್ಯದಲ್ಲಿ ವಿಧವೆ ಹಾಗೂ ಡೈವೊರ್ಸಿ ಮಹಿಳೆಯರಿಗೆ ಜೀವನ ಸಾಗಿಸಲು ಅನೂಕೂಲವಾಗುವಂತೆ ನಿಗಮದಿಂದ ರೂ ಒಂದು ಲಕ್ಷ ಸಾಲ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದರಡಿ ಶೇಕಡಾ 50ರಷ್ಟು ಹಣ ಸಬ್ಸಿಡಿ ರೂಪದಲ್ಲಿರುತ್ತದೆ. ಈ ಸಾಲ ಸೌಲಭ್ಯವನ್ನು ಒದಗಿಸುವ ಈ ಹೊಸ ಯೋಜನೆ ಈ ವರ್ಷದಿಂದಲೇ ಜಾರಿಯಾಗಲಿದೆ. ಅಲ್ಲದೆ ಪಿಯುಸಿ ವಿದ್ಯಾರ್ಥೀಗಳಿಗೂ ಅರಿವು ಯೋಜನೆಯನ್ನು ಮುಂದಿನ ಶಿಕ್ಷಣ ವರ್ಷದಿಂದ ವಿಸ್ತರಣೆಯಾಗಲಿದೆ ಎಂದರು.

ವೇದಿಕೆಯಲ್ಲಿ ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಮ್ ಎ ಗಫೂರ್, ವ್ಯವಸ್ಥಾಪಕ ಶ್ರೀಧರ್ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love