ಸರಕಾರದ ಆಡಳಿತ ಜನತೆಗೆ ತೃಪ್ತಿ ತಂದಿದೆ : ಸಿ ಎಮ್ ಹೇಳಿಕೆ ಜನರನ್ನು ಮೂರ್ಖರನ್ನಾಗಿಸಿದಂತೆ – ಅಶೋಕ್ ಕುಮಾರ್ ಕೊಡವೂರು
ಉಡುಪಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಶಾಸಕರನ್ನು ಖರೀದಿಸುವ ಮೂಲಕ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅತಿವೃಷ್ಠಿ, ಸಚಿವರುಗಳ ದ್ವಂಧ್ವ ಹೇಳಿಕೆಗಳು, ಬಂಡಾಯ ಹಾಗೂ ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲದೊಂದಿಗೆ ತನ್ನ ಒಂದು ವರ್ಷದ ಅಧಿಕಾರದ ಅವಧಿಯನ್ನು ಪೂರೈಸಿದ್ದೇ ದೊಡ್ಡ ಸಾಧನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಶಾಸಕರ ಖರೀದಿಯೊಂದಿಗೆ ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದರೂ ಸಂಪುಟ ವಿಸ್ತರಣೆಗೆ ಅನುಮತಿ ಕೊಡಲು ಬಿಜೆಪಿ ಹೈಕಮಾಂಡ್ ವಿಳಂಬ ನೀತಿ ಅನುಸರಿಸಿದ್ದರಿಂದ ಮುಖ್ಯಮಂತ್ರಿಗಳು ಏಕಾಂಗಿಯಾಗಿ ಅತಿವೃಷ್ಠಿ ಎದುರಿಸುವಂತಾಯಿತು. ಸರಕಾರದಲ್ಲಿ ಸಚಿವರುಗಳಿಲ್ಲದೆ ಸಂತ್ರಸ್ತರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರಾಜ್ಯದ ಜನತೆ 25 ಬಿಜೆಪಿ ಸಂಸದರನ್ನು ಕೇಂದ್ರಕ್ಕೆ ನೀಡಿದರೂ ಅತಿವೃಷ್ಠಿ ಸಮಯದಲ್ಲಿ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯುವಲ್ಲಿ ಸಂಸದರು ಯಾವುದೇ ಪ್ರಯತ್ನ ನಡೆಸಿಲ್ಲ. ಹಾಗಾಗಿ ಕೇಂದ್ರದ ಅನುದಾನ ತರುವಲ್ಲಿಯೂ ಸರ್ಕಾರ ವಿಫಲವಾಗಿದೆ. ನಂತರ ಉಪಚುನಾವಣೆ ಎದುರಿಸಿ ಸರಳ ಬಹುಮತ ಪಡೆಯಿತು ಎನ್ನುವಷ್ಟರಲ್ಲಿ ಎದುರಾಗಿದ್ದು ಕೊರೊನಾ ವೈರಸ್. ಈ ಸಂಕಷ್ಟ ಕಾಲದಲ್ಲಿಯೇ ಬಿಜೆಪಿಯಲ್ಲಿ ಬಂಡಾಯ ಕಾಣಿಸಿಕೊಂಡಿತು. ಹೊಂದಾಣಿಕೆಯಿಲ್ಲದೆ ಒಂದು ತಂಡವಾಗಿ ಕೆಲಸ ಮಾಡದೆ ಸೋಂಕು ನಿರ್ಮೂಲನೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೋವಿಡ್ ವೈರಸ್ ನಿಯಂತ್ರಿಸುವಲ್ಲಿ ಸರ್ಕಾರದ ಎಡವಟ್ಟು ನಿರ್ಧಾರದಿಂದ ಸರ್ಕಾರವೇ ಸೋಂಕು ಹರಡಲು ಕಾರಣವಾಗಿದೆ.
ಲಾಕ್ಡೌನ್ನಿಂದ ಆದ ಅನಾಹುತ ಅವಾಂತರದ ಪರಿಣಾಮಗಳಿಂದ ಔಷಧಿ, ಚಿಕಿತ್ಸೆ ಹಾಗೂ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸತ್ತವರು, ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಲ್ಲಿ ವಿಫಲ ಹಾಗೆಯೇ ಚಿಕಿತ್ಸೆಯ ವೆಚ್ಚ ಕಂಡು ಹೃದಯಾಘಾತಗೊಂಡವರು, ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡವರು ಇವೆಲ್ಲವೂ ಕೊರೋನಾ ನಿಯಂತ್ರಿಸುವಲ್ಲಿ ಸರಕಾರದ ವೈಫಲ್ಯಗಳಲ್ಲವೇ ? ಲಾಕ್ಡೌನ್ ಸಂದರ್ಭ ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ, ಹಸಿವಿನಿಂದ ಬಳಲಿದವರಿಗೆ ಸಾರ್ವಜನಿಕರು, ಬ್ಯಾಂಕುಗಳು, ಧಾರ್ಮಿಕ ಕೇಂದ್ರಗಳು, ಸೇವಾ ಸಂಸ್ಥೆಗಳು ಕಿಟ್ ಹಾಗೂ ಸಹಾಯ ಹಸ್ತ ಚಾಚಿದುದರಿಂದ ಸರಕಾರದ ಹೊರೆಯನ್ನು ಕಡಿಮೆಗೊಳಿಸಿದವು ಇದು ರಾಜ್ಯದ ಜನತೆಯ ಮಾನವೀಯತೆಯ ಸ್ಪಂದನೆಗೆ ಹೆಗ್ಗುರುತು ಎನ್ನುವಂತಾಗಿದೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಬದಲು ಜನರ ಜೀವ ಮತ್ತು ಜೀವನಕ್ಕೆ ಅಗತ್ಯವಾದ ಆರೋಗ್ಯ ಉಪಕರಣಗಳು ಮತ್ತು ಮೂಲ ಸೌಕರ್ಯಗಳ ಖರೀದಿಯಲ್ಲಿಯೇ ಅಕ್ರಮಗಳನ್ನು ನಡೆಸಿ ಲೂಟಿ ಹೊಡೆಯುವುದರಲ್ಲಿ ಸರಕಾರ ಮಗ್ನವಾಗಿದೆ. ಜನತೆ ತೀವ್ರ ಸಂಕಷ್ಟದಲ್ಲಿದ್ದು ಭಯದ ವಾತಾವರಣದಲ್ಲಿ ಬದುಕನ್ನು ಕಳೆಯುತ್ತಿದ್ದಾರೆ. ಆರ್ಥಿಕ ಚಟುವಟಿಕೆಗಳು ಸಂಪೂರ್ಣ ನೆಲಕಚ್ಚಿದ್ದು ಅಭಿವೃದ್ಧಿ ಕಾಮಗಾರಿಗಳು ನಿಂತುಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ತನ್ನ ಆಡಳಿತ ಜನತೆಗೆ ತೃಪ್ತಿ ತಂದಿದೆ ಎಂದು ಹೇಳಿಕೆ ನೀಡುವ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ ಎಂದು ಅವರು ಆರೋಪಿಸಿದ್ದಾರೆ.