ಸರಕಾರದ ನಿರ್ದೇಶನ ಬಂದ ನಂತರ ಡಿಸಿ ಮನ್ನಾ ಭೂಮಿ ಹಂಚಿಕೆ-ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ : ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿ ಹಂಚಿಕೆ ಕುರಿತಂತೆ, ಎಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು ಎನ್ನುವ ಕುರಿತಂತೆ ಸರಕಾರದಿಂದ ಸ್ಪಷ್ಟೀಕರಣ ಕೋರಿದ್ದು, ಸೂಕ್ತ ನಿರ್ದೇಶನ ಬಂದ ಕೂಡಲೇ ಅರ್ಹ ಪ.ಜಾತಿ ಪಂಗಡದ ಫಲಾನುಭವಿಗಳಿಗೆ ಭೂಮಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಅವರು ಶನಿವಾರ , ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ನಡೆದ ಪ.ಜಾತಿ ಪಂಗಡದವರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿ ಹಂಚಿಕೆ ಮಾಡುವ ಕುರಿತಂತೆ ಗೊಂದಲಗಳಿದ್ದು, ನಿರ್ದಿಷ್ಟವಾಗಿ ಎಷ್ಟು ಎಕರೆ ಹಂಚಿಕೆ ಮಾಡಬೇಕು ಎನ್ನುವ ಕುರಿತಂತೆ ಸರಕಾರದಿಂದ ನಿರ್ದೇಶನ ಕೋರಿದ್ದು, ನಿರ್ದೇಶನ ಬಂದ ನಂತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು, ಜಿಲ್ಲೆಯಲ್ಲಿ ಅತಿಕ್ರಮಣಗೊಂಡಿರುವ ಡಿಸಿ ಮನ್ನಾ ಭೂಮಿಯನ್ನು ಗುರುತಿಸಿ ತೆರವುಗೊಳಿಸುವ ಕಾರ್ಯವನ್ನು ತಹಸೀಲ್ದಾರ್ ಗಳು ಮಾಡುತ್ತಿದ್ದು, ಡಿಸಿ ಮನ್ನಾ ಭೂಮಿಗೆ ಸಂಬಂದಪಟ್ಟ ಸಮಸ್ಯೆಗಳನ್ನು ಚರ್ಚಿಸುವ ಸಲುವಾರಿ ತಾಲೂಕು ಮಟ್ಟದಲ್ಲಿ ಕೂಡಲೇ ಸಭೆ ಕರೆಯುವಂತೆ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಡಿಸಿ ಮನ್ನಾ ಭೂಮಿ ಹಂಚಿಕೆ ಕುರಿತಂತೆ ರಚಿಸಲಾಗಿರುವ ಸಮಿತಿಯ ಸಭೆಗಳು ನಿಗಧಿತವಾಗಿ ನಡೆಯುತ್ತಿಲ್ಲ, ಡಿಸಿ ಮನ್ನಾ ಭೂಮಿ ಬಗ್ಗೆ ತಿಳುವಳಿಕೆ ಇಲ್ಲದವರನ್ನು ಸದಸ್ಯರನ್ನಾಗಿ ಮಾಡಲಾಗಿದೆ, ಕುಂದಾಪುರದ ಮಡಾಮಕ್ಕಿಯಲ್ಲಿ ಒಬ್ಬನೇ ವ್ಯಕ್ತಿ 38 ಎಕರೆ ಪ್ರದೇಶ ಅತಿಕ್ರಮಣ ಮಾಡಿದ್ದಾನೆ ಎಂದು ಸಂಘಟನೆಗಳ ಮುಖಂಡರು ದೂರಿದರು, ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕುಂದಾಪುರ ತಹಸೀಲ್ದಾರರರಿಗೆ ಡಿಸಿ ಸೂಚಿಸಿದರು.
ಡಿಸಿ ಮನ್ನಾ ಭೂಮಿ ಹಂಚುವಲ್ಲಿ ಸಮಸ್ಯೆ ಇರುವಡೆ ಬಿಟ್ಟು, ಉಳಿದ ಕಡೆಗಳಲ್ಲಿ ಹಂಚಿಕೆ ಮಾಡುವ ಕುರಿತಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸಂಘಟನೆಗಳ ಮುಖಂಡರು ಕೋರಿದರು.
ಮರಳುಗಾರಿಕೆಯಲ್ಲಿ ದಲಿತರ ಹೆಸರಿನಲ್ಲಿ ಬೇನಾಮಿಯಾಗಿ ಮರಳುಗಾರಿಕೆ ಮಾಡುತ್ತಿದ್ದು, ಇದರಿಂದ ದಲಿತರಿಗೆ ಪ್ರಯೋಜನ ದೊರೆಯುತ್ತಿಲ್ಲ ಹಾಗೂ ದಲಿತರ ಹೆಸರಲ್ಲಿ ಉಡುಪಿ ನಗರಸಭೆಯಲ್ಲಿ ಬೋಗಸ್ ವೆಬ್ ಸೈಟ್ ತರೆದು ಹಣ ದುರುಪಯೋಗವಾಗಿದೆ ಎಂದು ಸುಂದರ್ ಮಾಸ್ತರ್ ದೂರಿದರು, ಈ ಕುರಿತಂತೆ ಉತ್ತರಿಸಿದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್.ಪಿ. ಡಾ.ಸಿ.ಬಿ.ವೇದಮೂರ್ತಿ, ಮರಳುಗಾರಿಕೆ ಲೈಸೆನ್ಸ್ ಬಗ್ಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಹಾಗೂ ವೆಬ್ ಸೈಟ್ ತೆರೆದಿರುವ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಹಂಗಾರಕಟ್ಟಯಲ್ಲಿನ ಫಿಶ್ ಕಟ್ಟಿಂಗ್ ಫ್ಯಾಕ್ಟರಿಯಿಂದ , ಪರಿಸರದಲ್ಲಿನ ಪ.ಜಾತಿ ಕುಟುಂಬದವರಿಗೆ ಹಾಗೂ ಸಮೀಪದ ಶಾಲೆಯಲ್ಲಿನ ಮಕ್ಕಳಿಗೆ ತೊಂದರೆಯಾಗಿದ್ದು, ಇದನ್ನು ಮುಚ್ಚಿಸುವಂತೆ ಮಂಜುನಾಥ್ ಬಾಳಕುದ್ರು ತಿಳಿಸಿದರು, ಈ ಕುರಿತಂತೆ ಈಗಾಗಲೇ ಮಕ್ಕಳ ರಕ್ಷಣಾ ಆಯೋಗ ಸಹ ಭೇಟಿ ನೀಡಿ ಪರಿಶೀಲಿಸಿದ್ದು, ಕೂಡಲೇ ಕ್ರಮ ಕೈಗೊಂಡು ವಾರದೊಳಗೆ ವರದಿ ನೀಡುವಂತೆ ಐರೋಡಿ ಗ್ರಾ.ಪಂ. ನ ಪಿಡಿಓ ,ಉಡುಪಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗೆ ಡಿಸಿ ಸೂಚಿಸಿದರು.
ಹೆದ್ದಾರಿಗಳ ಬದಿಯಲ್ಲಿ ಮದ್ಯದಂಗಡಿ ತೆರೆಯುವ ಕುರಿತಂತೆ ನಿಷೇಧವಿದ್ದರೂ ಸಹ ಬ್ರಹ್ಮಾವರ ಮತ್ತು ಕೋಟೇಶ್ವರದ ಬಳಿ ಮದ್ಯದಂಗಡಿಗಳು ಕಾರ್ಯ ನಿರ್ವಹಿಸುತ್ತಿರುವ ಕುರಿತು ವ್ಯಕ್ತವಾದ ದೂರು ಕುರಿತಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕೋಲ ಮತ್ತು ಕಂಗೀಲು ನೃತ್ಯ ಪ್ರಕಾರದದಲ್ಲಿ ಕೊರಗಜ್ಜನ ವೇಷಧಾರಿಯಿಂದ ಅಶ್ಲೀಲ ರೀತಿಯ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಪ್ರದರ್ಶನ ಮಾಡುವ ಪ್ರಕರಣ ಹೆಚ್ಚುತ್ತಿದ್ದು, ಇದರಿಂದ ಕೊರಗ ಜನಾಂಗದ ಅವಹೇಳನ ನಡೆಯುತ್ತಿದೆ ಇದನ್ನು ನಿಲ್ಲಿಸುವಂತೆ ಕೊರಗ ಮುಖಂಡರು ಕೋರಿದರು, ಈ ಕುರಿತಂತೆ ಸಂಬಂದಪಟ್ಟ ತಹಸೀಲ್ದಾರ್ ಗಳು ಕ್ರಮ ಕೈಗೊಳ್ಳುವಂತೆ ಡಿಸಿ ತಿಳಿಸಿದರು.
ತಲ್ಲೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಣ ಕಾಮಗಾರಿಯ ಕುರಿತು ಆಕ್ಷೇಪ ವ್ಯಕ್ತ ಪಡಿಸಿದ ಉದಯ ಕುಮಾರ್ ತಲ್ಲೂರು, ಕಾರ್ಕಳ ಅಂಬೇಡ್ಕರ್ ಭವನದ ಕಳಪೆ ನಿರ್ವಹಣೆ ಬಗ್ಗೆ ದೂರಿದರು.
ಹೊಳೆ ಶಂಕರ ನಾರಾಯಣ ನಿವಾಸಿಗಳಿಗೆ ರಸ್ತೆ ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವಂತೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್.ಪಿ. ಸೂಚಿಸಿದರು.
ಚಾಂತಾರು ಗ್ರಾಮದಲ್ಲಿ ಎಸ್,ಸಿ ಕಾಲೋನಿ ಬಳಿ ತ್ಯಾಜ್ಯ ಹಾಕುತ್ತಿರುವ ಕುರಿತಂತೆ ಪರಿಶೀಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗೆ ಡಿಸಿ ಸೂಚಿಸಿದರು.
ಪ.ಜಾತಿ ಪಂಗಡದವರು ಲೈಸೆನ್ಸ್ ಇದ್ದರೂ ಸಹ , ಲೋಕೋಪಯೋಗಿ ಇಲಾಖೆಯಲ್ಲಿ ಲೈಸೆನ್ಸ್ ನೊಂದಣಿ ಆಗುತ್ತಿಲ್ಲ, ಇದರಿಂದ ಟೆಂಡರ್ ಗುತ್ತಿಗೆ ಕಾಮಗಾರಿ ದೊರೆಯದೇ ಅವಕಾಶ ವಂಚಿತರಾಗುತ್ತಿದ್ದೇವೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಖಂಡರು ಕೋರಿದರು, ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಸಂಬಂದಪಟ್ಟ ಅಧಿಕರಿಗಳಿಗೆ ಡಿಸಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಣಣ ನಿಂಬರ್ಗಿ , ಕುಂದಾಪುರ ಸಹಾಯಕ ಆಯುಕ್ತ ಭೂ ಬಾಲನ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್ ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.