ಸರಕಾರದ ಯೋಜನೆಗಳನ್ನು ಮೀನುಗಾರರಿಗೆ ತಲುಪಿಸಲು ಕಾರ್ಯಪ್ರವೃತ್ತರಾಗೋಣ : ಯಶ್ಪಾಲ್ ಸುವರ್ಣ
ದ.ಕ ಮತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮತ್ತು ಮೀನುಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ದ.ಕ ಜಿಲ್ಲೆಯ ಮೀನುಗಾರಿಕಾ ಸಹಕಾರಿ ಸಂಘಗಳ ಪದಾಧಿಕಾರಿಗಳಿಗೆ ಆಯೋಜಿಸಿದ್ದ ಮೀನುಗಾರಿಕಾ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಶಿಬಿರವನ್ನು ಫೆಡರೇಷನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.
ಮೀನುಗಾರಿಕೆಗೆ ಸಂಬಂಧಿಸಿದ ಸರಕಾರದ ಯೋಜನೆಗಳನ್ನು ಮೀನುಗಾರಿಕಾ ಸಹಕಾರಿ ಸಂಘಗಳ ಮೂಲಕ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಮೀನುಗಾರರಿಗೆ ಯೋಜನೆಯ ಸೌಲಭ್ಯ ತಲುಪಿಸಲು ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಟ್ರಾಲ್ ಬೋಟ್ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷರಾದ ನಿತಿನ್ ಕುಮಾರ್, ಸಸಿಹಿತ್ಲು ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷರಾದ ಶೋಭೇಂದ್ರ ಸಸಿಹಿತ್ಲು, ಮೀನುಗಾರಿಕಾ ಉಪನಿರ್ದೇಶಕರಾದ ಪಾಶ್ರ್ವನಾಥ್. ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಪ್ರವೀಣ್ ಕುಮಾರ್ ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮೀನುಗಾರಿಕಾ ಸಹಾಯಕ ನಿರ್ದೇಶಕರುಗಳಾದ ಸುಶ್ಮಿತಾ ರಾವ್, ದಿಲೀಪ್ ಕುಮಾರ್, ಕುಮಾರಿ ಮಂಜುಳಾ ಶೆಣೈ ರವರು ಉಪಸ್ಥಿತರಿದ್ದರು.
ಮಾಹಿತಿ ಶಿಬಿರದಲ್ಲಿ ಮಂಗಳೂರು ವಲಯದ 20 ಮೀನುಗಾರಿಕಾ ಪ್ರಾಥಮಿಕ ಸಹಕಾರಿ ಸಂಘಗಳ ಪದಾಧಿಕಾರಿಗಳು, ಸದಸ್ಯರು ಸೇರಿ ಒಟ್ಟು 50 ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಪ್ರವೀಣ್ ಕುಮಾರ್ ಮೀನುಗಾರರಿಗೆ ನೀಡುತ್ತಿರುವ ಕಿಸಾನ್ ಕ್ರೆಡಿಟ್ ಕಾರ್ಡು ಮತ್ತು ಇತರ ಸಾಲ ಯೋಜನೆಗಳ ಬಗ್ಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳು ಮೀನುಗಾರಿಕಾ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಫೆಡರೇಶನ್ ವ್ಯವಸ್ಥಾಪಕ ನಿರ್ದೇಶಕರಾದ ಹರೀಶ್ ಕುಮಾರ್ ರವರು ಸ್ವಾಗತಿಸಿ, ಮೀನುಗಾರಿಕಾ ಸಹಾಯಕ ನಿರ್ದೇಶಕರಾದ ದಿಲೀಪ್ ಕುಮಾರ್ ವಂದಿಸಿದರು.