ಸರಕಾರದ ಸವಲತ್ತು ಸಾರ್ವಜನಿಕರಿಗೆ ತಲುಪಿಸಲು ಪ್ರಯತ್ನ – ಸುಭಾಶ್ಚಂದ್ರ ಶೆಟ್ಟಿ
ಮಂಗಳೂರು: ನಾಗರಿಕ ಸಮಿತಿ ಮಂಗಳೂರು ತಾಲೂಕು ಇದರ ವಾರ್ಷಿಕ ಮಹಾಸಭೆಯು ಸುರತ್ಕಲ್ ನ ಗೋವಿಂದದಾಸ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಸುಭಾಶಂದ್ರ ಶೆಟ್ಟಿ ಹೊಸಬೆಟ್ಟು ವಹಿಸಿದ್ದರು. ಕಾರ್ಯದರ್ಶಿ ಟಿ.ಎಸ್.ರಾಘವೇಂದ್ರ ಸಭೆಯಲ್ಲಿ ಲೆಕ್ಕ ಪತ್ರಗಳನ್ನು ಮಂಡಿಸಿದರು.
ಸಮಿತಿಯ ಅಧ್ಯಕ್ಷ ಸುಭಾಶಂದ್ರ ಶೆಟ್ಟಿ ಸಭೆಯನ್ನುದ್ದೇಶಿಸಿ ಸರಕಾರದ ಸವಲತ್ತು ಮತ್ತು ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಸಮಿತಿ ಸದಾ ಪ್ರಯತ್ನಿಸಲಿದೆ. ಅದಕ್ಕಾಗಿ ಶಾಸಕಾಂಗ ಮತ್ತು ಕಾರ್ಯಾಂಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು.ಇತ್ತೀಚಿನ ಮುಖ್ಯ ಸಮಸ್ಯೆ ಎಂದರೆ ಸುರತ್ಕಲ್‍ನಿಂದ ಪಂಪವೆಲ್‍ವರೆಗೆ ವಾಹನ ದಟ್ಟಣೆಯಿಂದ ಆಗುವ ಟ್ರಾಪಿಕ್ ಸಮಸ್ಯೆ, ಇದನ್ನು ಬಗೆಹರಿಸಲು ಇರುವ ಮಾರ್ಗ ಎಂದರೆ ಈ ರಸ್ತೆಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದು.
ಅದಕ್ಕಾಗಿ ಸುರತ್ಕಲ್ ಮಂಗಳೂರು ಬೈಪಾಸ್ ರಸ್ತೆ ಬೇಕು ಎಂದರು. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಬೈಪಾಸ್ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಮೀಕ್ಷೆ ಯೋಜನಾ ಕಾರ್ಯಕ್ರಮ ತಯಾರಿಕೆ, ಮೇಲ್ವಿಚಾರಣೆಗಾಗಿ ರಾಜ್ಯದ 25 ಜಿಲ್ಲೆಗಳಿಗೆ ರಾಜ್ಯ ಸರಕಾರ 275 ಕೋಟಿ ರೂ. ವೆಚ್ಚ ಮಾಡಲು ಸಂಪುಟದಲ್ಲಿ ಅನುಮತಿ ನೀಡಿದೆ ಎಂದವರು ತಿಳಿಸಿದರು.
ಈ ಯೋಜನೆಯನ್ನು ಸಮಗ್ರವಾಗಿ ಬಳಸಿಕೊಂಡು ಎನ್‍ಎಚ್-66ರ ಪಾವಂಜೆಯಿಂದ ತಿರುಗಿ ಚೇಳ್ಯಾರು, ಮಧ್ಯ, ಎಂಆರ್‍ಪಿಎಲ್, ಬಜ್ಪೆ, ಸುಂಕದಕಟ್ಟೆ, ಪೆÇಳಲಿ ದ್ವಾರದ ಮಾರ್ಗವಾಗಿ ಬೆಂಗಳೂರು ಹೆದ್ದಾರಿಯನ್ನು ತಲುಪಲು ಬೈಪಾಸ್ ರಸ್ತೆಯ ಸರ್ವೇ ಕಾರ್ಯವನ್ನು ಆದಷ್ಟು ಬೇಗ ಆಗುವಂತೆ ನಾಗರಿಕರೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಬಳಿಕ ಮಹಾ ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಸುಭಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ, ಬಿ.ಎಸ್.ಸನಿಲ್, ಅಬ್ದುಲ್ ಹಮೀದ್ ಕಾನ್, ಕಾರ್ಯದರ್ಶಿಗಳಾಗಿ ಟಿ.ಎಸ್.ರಾಘವೇಂದ್ರ, ಬಾಲಕೃಷ್ಣ ಶೆಟ್ಟಿ, ಯಶವಂತ ಶೆಟ್ಟಿ, ಕೋಶಾಧಿಕಾರಿಯಾಗಿ ರಮೇಶ ಸುರತ್ಕಲ್, ನಿರ್ದೇಶಕರಾಗಿ ಡಾ.ಗುರುರಾಜ್, ಸುರೇಶ್ ನಾಯಕ್, ಬಾಲಕೃಷ್ಣ ಶೆಟ್ಟಿ, ಚಂದ್ರಹಾಸ ರೈ, ಬಾಳ ಜಗನ್ನಾಥ ಶೆಟ್ಟಿ, ಉಲ್ಲಾಸ್ ಶೆಟ್ಟಿ, ಸುಧಾಕರ ಪೂಂಜ, ರೋಖಿ ಪಿಂಟೋ, ಪುಷ್ಪರಾಜ್ ಶೆಟ್ಟಿ ಮಧ್ಯ, ಲೀಲಾಧರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಮಧ್ಯ, ಸದಾಶಿವ ಶೆಟ್ಟಿ ಹೊಸಬೆಟ್ಟು ಇವರುಗಳನ್ನು ಆಯ್ಕೆ ಮಾಡಲಾಯಿತು.