Home Mangalorean News Kannada News ಸರಕಾರಿ ಆದೇಶ ಪಾಲಿಸದ ಎಮ್ ಆರ್ ಪಿ ಎಲ್ ಜೋಕಟ್ಟೆ ಗ್ರಾಮಸ್ಥರಿಂದ ಮೇ 3 ರಂದು...

ಸರಕಾರಿ ಆದೇಶ ಪಾಲಿಸದ ಎಮ್ ಆರ್ ಪಿ ಎಲ್ ಜೋಕಟ್ಟೆ ಗ್ರಾಮಸ್ಥರಿಂದ ಮೇ 3 ರಂದು ಪ್ರತಿಭಟನೆ

Spread the love

ಸರಕಾರಿ ಆದೇಶ ಪಾಲಿಸದ ಎಮ್ ಆರ್ ಪಿ ಎಲ್ ಜೋಕಟ್ಟೆ ಗ್ರಾಮಸ್ಥರಿಂದ ಮೇ 3 ರಂದು ಪ್ರತಿಭಟನೆ

ಮಂಗಳೂರು: ಎಮ್ ಆರ್ ಪಿ ಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದ ಮಾರಣಾಂತಿಕ ಮಾಲಿನ್ಯದ ವಿರುದ್ದ ಜೋಕಟ್ಟೆ ಗ್ರಾಮಸ್ಥರು ನಡೆಸಿದ ಹೋರಾಟದ ಭಾಗವಾಗಿ ರಾಜ್ಯ ಸರಕಾರ ಹಲವು ಪರಿಹಾರ ಕ್ರಮಗಳನ್ನು ಕಾಲಮಿತಿಯೊಳಗಡೆ ಕೈಗೊಳ್ಳುವಂತೆ ಸೂಚಿಸಿ ಆದೇಶ ಹೊರಡಿಸಿತ್ತು. ಸರಕಾರಿ ಆದೇಶವನ್ನು ಜಾರಿಗೊಳಿಸುವಲ್ಲಿ ಕಂಪೆನಿ ನಿರಾಸಕ್ತಿ ತೋರಿಸುತ್ತಿದ್ದು. ಕಂಪೆನಿಯ ನಿಯಮ ವಿರೋಧಿ ಧೋರಣೆಯ ವಿರುದ್ದ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಮೇ 3 ರಂದು ಬೆಳಿಗ್ಗೆ ಹತ್ತಕ್ಕೆ ಎಮ್ ಆರ್ ಪಿ ಎಲ್ ಪ್ರಧಾನದ್ವಾರದ ಮುಂಭಾಗ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿದೆ.

ಕಂಪೆನಿ ಜೋಕಟ್ಟೆ ಭಾಗದಲ್ಲಿ ನಿಯಮ ಬಾಹಿರವಾಗಿ ಕಾರ್ಯಾಚರಿಸಿ, ಅಪಾರ ಪ್ರಮಾಣದ ಮಾಲಿನ್ಯ ಉಂಟು ಮಾಡಿದೆ. ಇದರಿಂದ ಕಂಗೆಟ್ಟ ಸ್ಥಳೀಯರು ನಾಗರಿಕ ಹೋರಾಟ ಸಮಿತಿ ರಚಿಸಿ ಎರಡು ವರ್ಷಗಳ ಕಾಲ ಧೀರ್ಘ ಹೋರಾಟ ನಡೆಸಿದ್ದರು. ಹೋರಾಟದ ಫಲವಾಗಿ ಕಂಪೆನಿ ಮತ್ತು ಜನವಸತಿಯ ಮಧ್ಯೆ ಇಪ್ಪತ್ತೇಳು ಎಕರೆ ಭೂಸ್ವಾಧೀನ ಮಾಡಿ ಹಸಿರು ವಲಯ ನಿರ್ಮಿಸಬೇಕು, ಕೋಕ್ ಡಂಪಿಂಗ್ ಯಾರ್ಡ್ ಸ್ಥಳಾಂತರಿಸುವುದು ಸೇರಿದಂತೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿವಾರಣೆಗೆ ಕಾಲಮಿತಿಯೊಳಗಡೆ ಪರಿಹಾರ ಕೈಗೊಳ್ಳಬೇಕು ಎಂದು ಸರಕಾರ ಅಧಿಕೃತ ಆದೇಶ ಹೊರಡಿಸಿತ್ತು. ಸರಕಾರಿ ಆದೇಶವನ್ನು ಪಾಲಿಸುವುದಾಗಿ ಮಾತುಕೊಟ್ಟಿದ್ದ ಕಂಪೆನಿ, ಸರಕಾರದ ಕಾಲಮಿತಿ ಮುಗಿಯುತ್ತಾ ಬಂದರೂ ಆದೇಶ ಜಾರಿಗೊಳಿಸಲು ಹಿಂಜರಿಯುತ್ತಿದೆ.ಸರಕಾರಿ ಆದೇಶವನ್ನು ಧಿಕ್ಕರಿಸುತ್ತಿದೆ. ಇದರಿಂದ ಸ್ಥಳೀಯರು ಅಪಾರ ಕಷ್ಟನಷ್ಟಗಳಿಗೆ ಒಳಗಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಎಮ್ ಆರ್ ಪಿ ಎಲ್ ನ ಜನವಿರೋಧಿ ನೀತಿಯನ್ನು ಖಂಡಿಸಿ, ಸರ್ಕಾರಿ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಎಮ್ ಆರ್ ಪಿ ಎಲ್ ಪ್ರಧಾನದ್ವಾರದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version