ಸರಕಾರಿ ಆದೇಶ ಪಾಲಿಸಲಾಗದಿದ್ದಲ್ಲಿ ಜಿಲ್ಲೆ ಬಿಟ್ಟು ತೊಲಗಿ. ಎಮ್ ಆರ್ ಪಿ ಎಲ್ ವಿರುದ್ದ ಮುನೀರ್ ಕಾಟಿಪಳ್ಳ ಆಕ್ರೋಶ
ಕೋಕ್ ಸಲ್ಫರ್ ಫಟಕದಿಂದ ಜೋಕಟ್ಟೆ ಭಾಗದಲ್ಲಿ ಮಾಲಿನ್ಯದಿಂದ ಉಂಟಾದ ಅಪಾರ ಹಾನಿಯನ್ನು ತಡೆಗಟ್ಟಲು ರಾಜ್ಯ ಸರಕಾರ ಹಲವು ಪರಿಹಾರ ಕ್ರಮಗಳನ್ನು ಸೂಚಿಸಿ ಆದೇಶವನ್ನು ಹೊರಡಿಸಿತ್ತು. ಜನತೆ ನಡೆಸಿದ ಎರಡು ವರ್ಷಗಳ ನಿರಂತರ ಹೋರಾಟಕ್ಕೆ ಮಣಿದು ಸರಕಾರ ಹೊರಡಿಸಿದ ಆದೇಶವನ್ನು ಜಾರಿಗೊಳಿಸುವಲ್ಲಿ ಕಂಪೆನಿ ನಿರಾಸಕ್ತಿ ತೋರಿಸುತ್ತಿದೆ. ಆ ಮೂಲಕ ಕಂಪೆನಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಸರಕಾರದ ಆದೇಶಕ್ಕೆ ಬೆಲೆಯಿಲ್ಲದಂತೆ ಸರ್ವಾಧಿಕಾರಿ ಧೋರಣೆಯಿಂದ ನಡೆದು ಕೊಳ್ಳುತ್ತಿದೆ. ಕಂಪೆನಿಯ ಇಂತಹ ಅಹಂಕಾರಿ ನಡವಳಿಕೆಯನ್ನು ಜನತೆ ಸಹಿಸುವುದಿಲ್ಲ ಸರಕಾರಿ ಆದೇಶ ಪಾಲಿಸಲಾಗದಿದ್ದಲ್ಲಿ ಎಮ್ ಆರ್ ಪಿ ಎಲ್ ಜಿಲ್ಲೆ ಬಿಟ್ಟು ತೊಲಗಬೇಕು ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು. ಅವರು ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಎಮ್ ಆರ್ ಪಿ ಎಲ್ ಪ್ರಧಾನ ದ್ವಾರದ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನಡೆಸಿದ ನಿರಂತರ ಹೋರಾಟದ ಫಲವಾಗಿ 2016 ರ ಫೆಬ್ರವರಿಯಲ್ಲಿ ಗ್ರೀನ್ ಬೆಲ್ಟ್ ನಿರ್ಮಾಣ, ಕೋಕ್ ಸೈಲೋ ಸ್ಥಳಾಂತರ, ಶಬ್ದ ಮಾಲಿನ್ಯಕ್ಕೆ ತಡೆ, ಹೊಸ ಇ ಟಿ ಪಿ ಪ್ಲಾಂಟ್ ರಚನೆ ಸೇರಿದಂತೆ ಹಲವು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ ರಾಜ್ಯ ಸರಕಾರ ಎಮ್ ಆರ್ ಪಿ ಎಲ್ ಗೆ ಆದೇಶ ಹೊರಡಿಸಿತ್ತು. ಕಂಪೆನಿಯು ಸರಕಾರಿ ಆದೇಶ ಪಾಲಿಸುವುದಾಗಿ ಮಾತುಕೊಟ್ಟ ಹಿನ್ನಲೆಯಲ್ಲಿ ಜೋಕಟ್ಟೆ ನಾಗರಿಕರು ಹೋರಾಟ ಕೈಬಿಟ್ಟಿದ್ದರು. ಆದರೆ ಕಾಲಮಿತಿ ದಾಟಿದರೂ ಕಂಪೆನಿ ಯಾವುದೇ ಪರಿಹಾರ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ತಾ ಪಂ ಸದಸ್ಯ ಬಿ ಎಸ್ ಬಶೀರ್, dyfi ಜಿಲ್ಲಾ ಉಪಾಧ್ಯಕ್ಷ ಬಿ ಕೆ ಇಮ್ತಿಯಾಜ್, ಗ್ರಾಪಂ ಸದಸ್ಯ ಮೊಯ್ದಿನ್ ಶೆರೀಫ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಸಂಶುದ್ದೀನ್, ಸದಸ್ಯರಾದ ಆಬೂಬಕ್ಕರ್ ಬಾವಾ, ಹೋರಾಟ ಸಮಿತಿಯ ಮುಖಂಡರಾದ ಸಿಲ್ವಿಯಾ, ಸಿದ್ದೀಕ್ ಜೋಕಟ್ಟೆ, ಸೀತರಾಮ ಆಚಾರ್ಯ, ಇಕ್ಬಾಲ್ ಜೋಕಟ್ಟೆ, ಭವಾನಿ ಜೋಕಟ್ಟೆ, ಚಂದ್ರಶೇಖರ್, ದೊಂಬಯ್ಯ, ಮಯ್ಯದ್ದಿ ಜಮಾತ್, ಮಕ್ಸೂದ್ ಕಾನಾ, ಅಜ್ಮಾಲ್ ಕಾನಾ ಮುಂತಾದವರು ಉಪಸ್ಥಿತರಿದ್ದರು.