ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಶಸ್ವಿಗೆ ಸಹಕರಿಸಿ – ಪ್ರಮೋದ್ ಮಧ್ವರಾಜ್
ಉಡುಪಿ: ನವೆಂಬರ್ 19ರಂದು ಈ ದೇಶ ಕಂಡ ಅಪ್ರತಿಮ ನಾಯಕಿಯಾದ ಶ್ರೀಮತಿ ಇಂದಿರಾ ಗಾಂಧಿಯವರ 100ನೇ ಹುಟ್ಟುಹಬ್ಬದ ಆಚರಣೆಯೊಂದಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಉಡುಪಿಯ ಜನತೆಗೆ ಸುಸಜ್ಜಿತವಾದ 200 ಹಾಸಿಗೆಯುಳ್ಳ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಅಬ್ದುಲ್ಲ ಸಾಹೇಬ್ ಸರಕಾರಿ ಆಸ್ಪತ್ರೆಯನ್ನು ಉದ್ಘಾಟಿಸಲು ಉಡುಪಿಗೆ ಆಗಮಿಸಲಿದ್ದಾರೆ.
ಮದ್ಯಾಹ್ನ 3 ಗಂಟೆಗೆ ಆಸ್ಪತ್ರೆಯ ಉದ್ಘಾಟನೆಯೊಂದಿಗೆ ಸಭಾ ಕಾರ್ಯಕ್ರಮವು ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ವಿಗೆ ತೊಡಗಿಸಿಕೊಳ್ಳಬೇಕೆಂದು ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಪ್ರಮೋದ್ ಮಧ್ವರಾಜ್ರವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೂತನವಾಗಿ ಆಯ್ಕೆಯಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ್ ತೋನ್ಸೆಯವರನ್ನು ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷರು ಸನ್ಮಾನಕ್ಕೆ ಪ್ರತಿಕ್ರಿಯಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಪೂರ್ಣ ಸಹಕಾರವನ್ನು ಕೋರುವುದರೊಂದಿಗೆ ಪಕ್ಷದ ಕಾರ್ಯಕ್ರಮಗಳಾದ ಮನೆ ಮನೆಗೆ ಕಾಂಗ್ರೆಸ್ ಹಾಗೂ ಇಂದಿರಾ ಗಾಂಧಿಯವರ 100ನೇ ಹುಟ್ಟಹಬ್ಬದ ಆಚರಣೆಯನ್ನು ಪ್ರತೀ ಬೂತ್ ಮಟ್ಟಗಳಲ್ಲಿ ಆಚರಿಸಬೇಕೆಂಬ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶವನ್ನು ತಿಳಿಯಪಡಿಸಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಬಿ. ನರಸಿಂಹ ಮೂರ್ತಿ, ಮೀನಾಕ್ಷಿ ಮಾಧವ ಬನ್ನಂಜೆ, ಸಂಧ್ಯಾ ತಿಲಕ್ರಾಜ್, ಶೋಭಾ ಪೂಜಾರಿ, ಬಿ.ಪಿ. ರಮೇಶ್ ಪೂಜಾರಿ, ಅನಂತ ನಾಯ್ಕ್, ಗಣೇಶ್ ನೆರ್ಗಿ, ಕೀರ್ತಿ ಶೆಟ್ಟಿ, ವಿಶ್ವಾಸ್ ಅಮೀನ್, ನವೀನ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಭಾಸ್ಕರ್ರಾವ್ ಕಿದಿಯೂರು, ಲಕ್ಷ್ಮಣ ಶೆಣೈ, ಪ್ರಶಾಂತ ಪೂಜಾರಿ, ಜನಾರ್ದನ್ ಭಂಡಾರ್ಕಾರ್ , ಚಂದ್ರಿಕಾ ಶೆಟ್ಟಿ, ರಫಿಕ್ ಕರಂಬಳ್ಳಿ, ಸುಜಯ ಪೂಜಾರಿ, ಧನಂಜಯ ಕುಂದರ್, ಗೋಪಾಲ್ ಹಾಗೂ ನಗರಸಭಾ ಸದಸ್ಯರುಗಳು ಭಾಗವಹಿಸಿದ್ದರು.