ಸರಕಾರಿ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಲಿ: ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು: ಬಡವರು ಮತ್ತು ಹಿಂದುಳಿದ ವರ್ಗದವರಿಗೆ ಉಚಿತ ಆರೋಗ್ಯ ಚಿಕಿತ್ಸೆಗಾಗಿ ಸರ್ಕಾರ ಜಾರಿಗೊಳಿಸಿರುವ ಪ್ರತಿಯೊಂದು ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕು ಎಂದು ದಕ್ಷಿಣ ವಿಧಾಸಭಾ ಕ್ಷೇತ್ರ ಶಾಸಕ ಡಿ ವೇದವ್ಯಾಸ್ ಕಾಮತ್ ಹೇಳಿದರು.
ಶನಿವಾರ ಮಂಗಳೂರು ನಗರ ವ್ಯಾಪ್ತಿಯ ಬಿಜೈ, ಪಡೀಲ್, ಎಕ್ಕೂರು ಇಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂತನ ಕಟ್ಟಡಗಳನ್ನು ಉದ್ಘಾಟನೆ ನಡೆಸಿ ಮಾತನಾಡಿದ ಇವರು, ನಗರದ ಜನತೆಯ ಆರೋಗ್ಯ ಸುಧಾರಣೆಯ ಉದ್ದೇಶದಿಂದ ಪ್ರತಿ ಕಟ್ಟಡ ಕ್ಕೆ ರೂ. 45 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡಗಳ ನಿಮಾರ್ಣಗೊಂಡಿದೆ. ಕಾರ್ಮಿಕ ವರ್ಗದವರಿಗೆ ಇದರ ಸೇವೆ ಜೊತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಬೆಳಗ್ಗೆ 9.00 ಗಂಟೆ ಯಿಂದ ಸಂಜೆ 7.30 ರವರೆಗೆ ಆರೋಗ್ಯ ಕೇಂದ್ರ ತೆರೆದಿರುತ್ತದೆ. ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಿ ಎಂದು ಹೇಳಿದರು.
ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಜನತೆಗೆ ವೈದ್ಯರು ಉತ್ತಮ ಗುಣಮಟ್ಟದ ಚಿಕಿತ್ಸೆ ಜೊತೆಗೆ ಸ್ನೇಹಭಾವದಿಂದ ನಡೆದುಕೊಂಡು ಬಹಳ ಬೇಗನೆ ಗುಣಮುಖರಾಗುವಲ್ಲಿ ತಮ್ಮ ಸಹಕಾರ ನೀಡಿ. ಜನತೆಯ ವಿಶ್ವಾಸ ನಂಬಿಕೆಗೆ ಪಾತ್ರರಾಗಿ ಎಂದು ವ್ಶೆದ್ಯರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಧಂರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರಾಮಕೃಷ್ಣ ರಾವ್, ಮಂಗಳೂರು ತಾಲೂಕು ಆರೋಗ್ಯ ಅಧಿಕಾರಿ ಡಾ ಸಂಜಯ್ ಕುಮಾರ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ ನವೀನ್ ಚಂದ್ರ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಪ್ರವೀನ್ ಚಂದ್ರ ಆಳ್ವಾ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.