Home Mangalorean News Kannada News ಸರಕಾರಿ ವಸತಿ ಗೃಹಗಳ ಕಳವು ಪ್ರಕರಣದಲ್ಲಿ ಭಾಗಿಯಾದ ಮೂರು ಆರೋಪಿಗಳ ಸೆರೆ

ಸರಕಾರಿ ವಸತಿ ಗೃಹಗಳ ಕಳವು ಪ್ರಕರಣದಲ್ಲಿ ಭಾಗಿಯಾದ ಮೂರು ಆರೋಪಿಗಳ ಸೆರೆ

Spread the love

ಸರಕಾರಿ ವಸತಿ ಗೃಹಗಳ ಕಳವು ಪ್ರಕರಣದಲ್ಲಿ ಭಾಗಿಯಾದ ಮೂರು ಆರೋಪಿಗಳ ಸೆರೆ

ಮಂಗಳೂರು:  ನಗರದ ಸರಕಾರಿ ವಸತಿ ಗೃಹಗಳ ಬಾಗಿಲಿನ ಬೀಗವನ್ನು ಹಾಡು ಹಗಲೇ ಮುರಿದು ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಹಾಗೂ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಕಾಟಿಪಳ್ಳ ನಿವಾಸಿ ಜಯಂತ @ ಸಂದೀಪ್ @ ಠಾಪೋರಿ (23), ಹಾಗೂ ಈತನಿಗೆ ಕಳವುಗೈದ ಚಿನ್ನಾಭರಣಗಳನ್ನು ಹಣಕಾಸು ಸಂಸ್ಥೆಗಳಲ್ಲಿ ಅಡಮಾನ ಇರಿಸಿದ ಆರೋಪಿಗಳಾದ ವಿಜ್ವಲ್ ಪೂಜಾರಿ (23),  ಗುಣವತಿ (48) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 12 ರಂದು ಮಂಗಳೂರು ನಗರದ ಬೊಂದೇಲ್ ಮೆಸ್ಕಾ ಕೆಪಿಟಿಸಿಎಲ್  ವಸತಿಗೃಹ ನಂಬ್ರ: ಇಬಿ 24 ರ ನಿವಾಸಿ ಶ್ರೀ ಜೋಸ್  ಮತ್ತು ಅವರ ಪತ್ನಿ ಶ್ರೀಮತಿ  ಥೆರಸಾ ರವರು ಮದ್ಯಾಹ್ನ 1-30 ಗಂಟೆಗೆ ವಸತಿಗೃಹದ ಬಾಗಿಲಿನ ಬೀಗವನ್ನು ಹಾಕಿ ಜ್ಯೋತಿ ಕೆ ಎಂ.ಸಿ ಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ತಾಯಿಯನ್ನು ನೋಡಿ ಬರಲು ಹೋಗಿದ್ದು, ಅವರು ಸಂಜೆ ಸುಮಾರು 5-30 ಗಂಟೆಗೆ ವಾಪಾಸು ಬಂದು ವಸತಿಗೃಹದ ಬೀಗವನ್ನು ತೆಗೆದು ನೋಡಲಾಗಿ ಮನೆಯ ಹಿಂಭಾಗದ ಬಾಗಿಲು ತೆರೆದಿದ್ದು, ಬೆಡ್ ರೂಮಿನ ಎರಡು ಕಪಾಟುಗಳು ತೆರೆದಿದ್ದು, ಗೋದ್ರೇಜ್ ನಲ್ಲಿದ್ದ ರೂ. 3,50,000/- ಮೌಲ್ಯದ ಸುಮಾರು 20 ಪವನ್ ಚಿನ್ನಾಭರಣಗಳು ಕಳ್ಳತನವಾಗಿತ್ತು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಕ್ಟೋಬರ್ 24 ರಂದು ಮಂಗಳೂರು ಉರ್ವಾಸ್ಟೋರ್ ಪಿಡಬ್ಲೂಡಿ ಕ್ವಾಟರ್ಸ್ ನಿವಾಸಿ ಹರೀಶ್ ಕುಮಾರ್ ರವರು   ಬೆಳಿಗ್ಗೆ 09-45 ಗಂಟೆಗೆ ಕ್ವಾಟರ್ಸ್ ನ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ ಬಂದು ವಸತಿಗೃಹದ ಬೀಗವನ್ನು ತೆರೆದು ನೋಡಲಾಗಿ ಹಿಂಬದಿಯ ಬಾಗಿಲು ತೆಗೆದಿದ್ದು, ಮನೆಯ ದೇವರ ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನ ಬೀಗವನ್ನು ಮುರಿದು ಕಪಾಟಿನಲ್ಲಿದ್ದ ಒಟ್ಟು ರೂ. 20 ಪವನ್ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವುಗೈದಿದ್ದು, ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ನಗರದಲ್ಲಿ ಇತ್ತೀಚೆಗೆ ಹಾಡು ಹಗಲೇ ಸರಕಾರಿ ವಸತಿ ಗೃಹಗಳ  ಹಾಗೂ ಒಂಟಿ ಮನೆಗಳ ಬಾಗಿಲಿನ ಬೀಗವನ್ನು ಒಡೆದು ಬೆಲೆಬಾಳುವ ಸೊತ್ತುಗಳನ್ನು ದೋಚುತ್ತಿದ್ದ ಕಳ್ಳರ ಜಾಲವನ್ನು ಪತ್ತೆ ಹಚ್ಚುವ ಸಲುವಾಗಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ದಸ್ತಗಿರಿಯಾಗಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡ ಆರೋಪಿಗಳನ್ನು ಬಂಧಿಸಿದ್ದಾರೆ.

  ಆರೋಪಿ ಜಯಂತ್ @ ಸಂದೀಪ್ @ ಠಾಪೋರಿ ಎಂಬಾತನು ಈ ಹಿಂದೆ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನು ಸುಮಾರು 2 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡು ಬಂದಿದ್ದನು. ಈತನು ಈ ಹಿಂದೆ ಕೂಡಾ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಉರ್ವಾಸ್ಟೋರ್ ಪಿಡಬ್ಲೂಡಿ ವಸತಿಗೃಹದ ಬಾಗಿಲಿನ ಬೀಗವನ್ನು ಮುರಿದು ಕಳವುಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈತನ ವಿರುದ್ಧ ಈ ಹಿಂದೆ 2014 ನೇ ಇಸವಿಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ,  2016 ನೇ ಇಸವಿಯಲ್ಲಿ ಸುಲಿಗೆ ಪ್ರಕರಣ  ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ.

ಇನ್ನೋರ್ವ ಆರೋಪಿ ವಿಜ್ವಲ್ ಪೂಜಾರಿ ಎಂಬಾತನು ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಚೇಳಾರು ಎಂಬಲ್ಲಿ ಮಣಿಕಂಠ ಎಂಬಾತನ ಕೊಲೆ ಪ್ರಕರಣ, ಕಾಟಿಪಳ್ಳದಲ್ಲಿ ಯುವಕನೊಬ್ಬನ ಮೇಲೆ ನಡೆದ ಕೊಲೆ ಯತ್ನ ಪ್ರಕರಣ, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯಲ್ಲಿ ನಡೆದ ಕೊಲೆ ಯತ್ನ ಪ್ರಕರಣ, ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈಗ ಸುಮಾರು 4 ತಿಂಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದನು. ಈತನು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಗೂಂಡಾ ಕಾಯ್ದೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ರೌಡಿ ಕೋಡಿಕೆರೆ ಮನೋಜ್ ಎಂಬಾತನ ಸಹಚರನಾಗಿರುತ್ತಾನೆ.

ಆರೋಪಿ ಜಯಂತ್ @ ಸಂದೀಪ್ @ ಠಾಪೋರಿಯು ಕಳವುಗೈದ ಚಿನ್ನಾಭರಣಗಳನ್ನು ವಿಜ್ವಲ್ ಪೂಜಾರಿ ಹಾಗೂ ಗುಣವತಿ ಯವರ ಮೂಲಕ ಸುರತ್ಕಲ್ ನ 2 ಹಣಕಾಸು ಸಂಸ್ಥೆಗಳಲ್ಲಿ ಅಡಮಾನ ಇರಿಸಿದ್ದು, ಅಡಮಾನ ಇರಿಸಿ ಬಂದ ಹಣದ ಸ್ವಲ್ಪಾಂಶವನ್ನು ಇವರಿಬ್ಬರೂ ತಮ್ಮಲ್ಲಿರಿಸಿದ್ದರು.  ಆರೋಪಿಗಳ ವಶದಿಂದ ಉರ್ವಾ ಠಾಣಾ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಮೇಲ್ಕಂಡ ಎರಡು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 131 ಗ್ರಾಂ ಚಿನ್ನಾಭರಣಗಳು, ನಗದು ರೂ. 15,000/-, ಮೊಬೈಲ್ ಫೋನ್-1, ರೋಲ್ಡ್ ಗೋಲ್ಡ್ ಆಭರಣಗಳು, ಕಳ್ಳತನಕ್ಕೆ ಉಪಯೋಗಿಸಿದ ಚೂರಿ, ಕಬ್ಬಿಣದ ರಾಡ್, ಬಜಾಜ್ ಪಲ್ಸರ್ ಬೈಕ್, ಮಹೇಂದ್ರ ಬೊಲೆರೋ ಜೀಪುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 8,44,657/- ಆಗಿರುತ್ತದೆ.  ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು  ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

.


Spread the love

Exit mobile version