ಸರಕಾರಿ ಶಾಲೆ ಊರಿನ ಶಾಲೆಯಾಗಬೇಕು : ವಿನಯ ಕುಮಾರ್ ಸೊರಕೆ
ಉಡುಪಿ: ಸರಕಾರಿ ಶಾಲೆ ಊರಿನ ಶಾಲೆಯಾದರೆ ಮಾತ್ರ ಅಬಿವೃದ್ಧಿ ಹೊಂದುತ್ತದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ನಮ್ಮ ಮಕ್ಕಳಿಗೆ ಭವಿಷ್ಯವೆಂಬ ಭ್ರಾಂತಿ ಪೋಷಕರಲ್ಲಿದೆ. ಪ್ರೌಢಶಾಲಾ ನಂತರ ವಿದ್ಯಾರ್ಥಿಗಳು ನಗರದ ಕಡೆ ಮುಖ ಮಾಡುವ ಬದಲು ಸ್ಥಳೀಯ ಪ.ಪೂ.ಕಾಲೇಜಿನಲ್ಲಿಯೇ ಓದನ್ನು ಮುಂದುವರಿಸುವುದು ಒಳ್ಳೆಯದು. ಪ.ಪೂ.ವಿಭಾಗದಲ್ಲಿಯೂ ಮದ್ಯಾಹ್ನದ ಉಚಿತ ಬಿಸಿಯೂಟದ ಯೋಜನೆಯನ್ನು ಶಾಲಾಭಿವೃದ್ಧಿ ಸಮಿತಿ ದಾನಿಗಳ ನೆರವಿನಿಂದ ಕಾರ್ಯಗತಗೊಳಿಸಿದರೆ ಉತ್ತಮ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಉದ್ಯಾವರ ಸರಕಾರಿ ಪ.ಪೂ.ಕಾಲೇಜಿನ ಶಾಲಾ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಲ್ಲಿ ಮುಂದಿದ್ದಾರೆ. ಆದ್ದರಿಂದ ಅವರಿಗೆ ಉತ್ತೇಜನ ನೀಡಲು ರಾಷ್ಟ್ರ ಮಟ್ಟದ ವಿಜ್ಞಾನ ಕೇಂದ್ರವನ್ನು ಬೆಳಪುವಿನಲ್ಲಿ ಸ್ಥಾಪಿಸಲಾಗುವುದು . ಈ ಬಗ್ಗೆ ಮುಖ್ಯ ಮಂತ್ರಿಗಳು ಶಿಲಾನ್ಯಾಸ ಮಾಡಿದ್ದಾರೆ. 5 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿದೆ. ಗುಮಾಸ್ತಗಿರಿ ಉತ್ಪಾದನೆಯ ಶಿಕ್ಷಣದ ಬದಲು ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಲು ಕಾಪು ಹೋಬಳಿ ಮಟ್ಟದಲ್ಲಿ 3 ಐ.ಟಿ.ಐ.ಗಳನ್ನು ಸ್ಥಾಪಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸರಕಾರದಿಂದ ಕೊಡಮಾಡಿದ ಉಚಿತ ಸಮವಸ್ತ್ರ, ಶ್ಯೂ ಮತ್ತು ಉಚಿತ ಗುರುತುಚೀಟಿಯನ್ನು ಅತಿಥಿಗಳು ವಿತರಿಸಿದರು. ಗುರುತು ಚೀಟಿ, ಶಾಲಾ ಕೈಪಿಡಿಯ ಪ್ರವರ್ತಕರಾದ ಗ್ರಾ.ಪಂ. ಸದಸ್ಯ ಕಿರಣ್ ಕುಮಾರ್, ತಿಲಕರಾಜ ಸಾಲ್ಯಾನ್ ಮತ್ತು ಹೆನ್ರಿ ಡಿ’ಸೋಜ ಅವರನ್ನು ಮಾಜಿ ಸಚಿವರು ಅಭಿನಂದಿಸಿದರು. ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ. ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿವಿಯನ್ ಡಿ’ಸೋಜ ಮತ್ತು ಕು|ದಿವ್ಯಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆಸಲ್ಲಿಸಿ ಹನುಮಂತ ನಗರದ ಶಾಲೆಗೆ ವರ್ಗಾವಣೆಗೊಂಡಿದ್ದ ಶಿಕ್ಷಕಿ ದಯಾವತಿ ಇವರನ್ನು ಅಭಿನಂದಿಸಲಾಯಿತು. ಶಿಕ್ಷಕಿ ಜಯಾ ತಂತ್ರಿ ಕೆ. ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಪಿ.ಯು.ಸಿ.ವಿಭಾಗದ ಮದ್ಯಾಹ್ನದ ಬಿಸಿಯೂಟ ಪ್ರಾರಂಬಿಸಲು ಉದ್ಯಾವರ ಫ್ರೆಂಡ್ಸ್ ಕ್ಲಬ್ ನವರು 20,000 ರೂಪಾಯಿ ಪ್ರಥಮ ದೇಣಿಗೆಯನ್ನು ಘೋಷಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷೆ ಸುಗಂಧೀ ಶೇಖರ್, ತಾ.ಪಂ.ಸದಸ್ಯೆ ರಜನಿ ಅಂಚನ್ ,ಗ್ರಾ.ಪಂ.ಉಪಾಧ್ಯಕ್ಷ ರಿಯಾಜ್ ಪಳ್ಳಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್ ಕುಮಾರ್ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಾಮನ್ ಬಂಗೇರ , ಪಿ.ಟಿ.ಎ. ಅಧ್ಯಕ್ಷ ರಮೇಶ್ ಆಚಾರ್ಯ ವೇದಿಕೆಯಲ್ಲಿದ್ದರು. ಸಂಸ್ಥೆಯ ಕುಂದು ಕೊರತೆಗಳ ಬಗ್ಗೆ ಪ್ರತ್ಯೇಕವಾಗಿ ಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರು ಮನವಿ ಸಲ್ಲಿಸಿದರು. ಮಾಜಿ ಸಚಿವರು ಸ್ಪಂದಿಸಿ ಈಡೇರಿಸುವುದಾಗಿ ಭರವಸೆ ನೀಡಿದರು . ಪ್ರಾಂಶುಪಾಲ ಮಹೇಂದ್ರ ಎನ್. ಶರ್ಮ ಸ್ವಾಗತಿಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಮೂಕಾಂಬೆ ವಂದಿಸಿದರು. ಉಪನ್ಯಾಸಕ ಎಸ್ ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.