ಸರಗಳ್ಳತನ ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಸಮೀಪದ ನಾಗುರಿಯಲ್ಲಿ ಮಹಿಳೆಯೊಬ್ಬರ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಡೀಲ್ ಜಂಕ್ಷನ್ ನಲ್ಲಿ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುಲಶೇಖರ ನಿವಾಸಿಗಳಾದ ಹರ್ಷಿತ್ ಶೆಟ್ಟಿ ಯಾನೆ ಹರ್ಷಿತ್ (25) ಮತ್ತು ಹವಿತ್ ಪೂಜಾರಿ (24) ಎಂದು ಗುರುತಿಸಲಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿ ಆಂಜೆಲೋರ್ ಚರ್ಚ್ ನ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ದಿನಾಂಕ: 22-04-2019 ರಂದು ಮಧ್ಯಾಹ್ನ ಸಮಯ ದಾರಿ ಕೇಳುವ ನೆಪದಲ್ಲಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಕರಿ ಮಣಿ ಸರವನ್ನು ದರೋಡೆ ಮಾಡಿಕೊಂಡು ಹೋದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಹರ್ಷಿತ್ ಶೆಟ್ಟಿ ಎಂಬಾತನ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ, ಕಾವೂರು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಹಾಗೂ ದರೋಡೆಗೆ ಯತ್ನ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕರಣ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ. ಇನ್ನೊರ್ವ ಆರೋಪಿ ಹವಿತ್ ಪೂಜಾರಿ ಎಂಬಾತನ ವಿರುದ್ದ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಗಳು ದರೋಡೆ ಮಾಡಿದ ರೂ. 50,000/- ಮೌಲ್ಯದ ಚಿನ್ನದ ಕರಿಮಣಿ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ರೂ. 60,000/- ಮೌಲ್ಯದ ಮೋಟಾರ್ ಸೈಕಲ್ ನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸೊತ್ತುಗಳ ಒಟ್ಟು ಮೌಲ್ಯ ರೂ. 1,10,000/- ಆಗಿರುತ್ತದೆ. ಆರೋಪಿಗಳಾದ ಹರ್ಷಿತ್ ಶೆಟ್ಟಿ ಮತ್ತು ಹವಿತ್ ಪೂಜಾರಿ ಎಂಬವರುಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಈ ಪತ್ತೆ ಕಾರ್ಯಾಚರಣೆಯನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ (ಐ.ಪಿ.ಎಸ್), ಉಪ-ಪೊಲೀಸ್ ಆಯುಕ್ತರಾದ ಹನುಮಂತರಾಯ (ಐ.ಪಿ.ಎಸ್), ಲಕ್ಷ್ಮೀ ಗಣೇಶ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಮರಾವ್ ರವರ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜಗದೀಶ್ ಆರ್., ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್., ಪ್ರೊ. ಪಿ.ಎಸ್.ಐ. ಸುದೀಪ್ ಹಾಗೂ ಸಿಬ್ಬಂದಿಗಳಾದ ಸಂತೋಷ್, ಮದನ್, ವಿನೋದ್, ರಾಜೇಶ್, ಸತೀಶ್, ನೂತನ್, ಸಂದೀಪ್, ಭರಣಿ ದೀಕ್ಷಿತ್, ಕಾರ್ತಿಕ್, ಜೀವನ್ ಮತ್ತು ಮೇಘರಾಜ್ ರವರು ನಡೆಸಿರುತ್ತಾರೆ.