Home Mangalorean News Kannada News ಸರ್ಕಾರಿ ಅಧಿಕಾರಿಗಳ ವರ್ಗಾವಣೆಯ‌ ಹಿಂದೆ ಹಣದ ದಂಧೆ

ಸರ್ಕಾರಿ ಅಧಿಕಾರಿಗಳ ವರ್ಗಾವಣೆಯ‌ ಹಿಂದೆ ಹಣದ ದಂಧೆ

Spread the love

ಸರ್ಕಾರಿ ಅಧಿಕಾರಿಗಳ ವರ್ಗಾವಣೆಯ‌ ಹಿಂದೆ ಹಣದ ದಂಧೆ

  • ವರ್ಗಾವಣೆ ದಂಧೆಯ ವಿರುದ್ದ ಮೌನ ಮುರಿದ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ |ಜಿಲ್ಲೆಯಲ್ಲಿ ನಡೆದ ಕಳಪೆ ಕಾಮಗಾರಿಯ ಬಗ್ಗೆ ಯಾರೂ ಸೊಲ್ಲೆತ್ತುವುದಿಲ್ಲ
  • ಅಷ್ಟರ ಮಟ್ಟಿಗೆ ಉಡುಪಿ ಜಿಲ್ಲೆ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದೆ | ಜಾತಿ ರಾಜಕಾರಣದ ಭೀತಿಯಲ್ಲಿ ಇಂದಿನ ರಾಜಕೀಯ ನಲುಗುತ್ತಿದೆ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಕಳವಳ

ಕುಂದಾಪುರ : ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಹಿಂದೆ ಹಣದ ದಂಧೆ ನಡೆಯುತ್ತಿದೆ. ಹಣ ಕೊಟ್ಟು ಬರುವ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ನಗರದ ಆರ್‌.ಎನ್‌.ಶೆಟ್ಟಿ ಮಿನಿ ಹಾಲ್‌ನಲ್ಲಿ ಶುಕ್ರವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ವಲಯ, ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಯಾವುದೇ ಜನಪ್ರತಿನಿಧಿಗಳು ಇಲ್ಲಿ ನಡೆಯುತ್ತಿರುವ ಭ್ರಷ್ಟತೆಯ ಬಗ್ಗೆ ಮಾತನಾಡೋದಿಲ್ಲ. ಜನಸಾಮಾನ್ಯರು ಕೆಲಸ ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ಹೋದರೆ, ಅಲ್ಲಿ ದುಡ್ಡಿನ ಮುಖ ನೋಡುವಂತಾಗಿದೆ. ಅಷ್ಟರ ಮಟ್ಟಿಗೆ ಉಡುಪಿ ಜಿಲ್ಲೆ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದೆ. ಇದರಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ ಎನ್ನುವ ಭಾವನೆ ಬಲವಾಗುತ್ತದೆ. ಜಿಲ್ಲೆಯಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಕಳಪೆ ಕಾಮಗಾರಿಯ ಬಗ್ಗೆ ಯಾರೂ ಸೊಲ್ಲೆತ್ತುವುದಿಲ್ಲ. ಕಳಪೆಯ ಬಗ್ಗೆ ಪ್ರಾಸ್ತಾಪಿಸಿದರೆ ಎಲ್ಲಿ ಗುತ್ತಿಗೆದಾರರಿಗೆ ಬೇಸರವಾಗುತ್ತದೆಯೋ ಎನ್ನುವ ಆಂತರಿಕ ಭಾವನೆಯನ್ನು ಹೊಂದಿರುವ ಜನಪ್ರತಿನಿಧಿಗಳೂ, ಗುತ್ತಿಗೆದಾರರ ಜೊತೆಭಾಗೀದಾರರೇ ಆಗಿದ್ದಾರೆ. ಜನರ ಪರವಾಗಿ ನಿಲ್ಲಬೇಕಾದವರು, ಜಾತಿ ರಾಜಕಾರಣ ಹಾಗೂ ಭ್ರಷ್ಟತೆಯ ಪರವಾಗಿದ್ದಾರೆ. ಜಾತಿ ರಾಜಕಾರಣದ ಭೀತಿಯಲ್ಲಿ ರಾಜಕೀಯ ನಲುಗುತ್ತಿದೆ ಎಂದು ಕೆ. ಪ್ರತಾಪಚಂದ್ರ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯ ರೈತರ ಸೊತ್ತಾಗಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರದ ವಿರುದ್ಧ ಮಾತಾಡುವ ಧ್ವನಿ ಕ್ಷೀಣವಾಗುತ್ತಿದೆ. ಅದರ ವಸ್ತುಗಳನ್ನು ಗುಜರಿ ಮಾರಾಟ ಮಾಡಿರುವ ವಿಚಾರದ 18 ಕೋಟಿ ಅವ್ಯವಹಾರದ ಕುರಿತು ಮಾತನಾಡಬೇಕಾದವರೇ ಮೌನಕ್ಕೆ ಶರಣಾಗಿದ್ದಾರೆ. ಕಾರ್ಖಾನೆಯ ಅಡಿಪಾಯದ ಕಲ್ಲು ತೆಗೆದು ಮಾರಾಟ ಮಾಡಿದರೂ, ನಮ್ಮ ರೈತರು ಮಾತನಾಡುವುದಿಲ್ಲ. ಪ್ರಮುಖ ರಾಜಕೀಯ ಪಕ್ಷಗಳೇ ಈ ವಿಚಾರ ಯಾವತ್ತೂ ಹೋರಾಟದ ವಿಷಯವೇ ಆಗಿರಲಿಲ್ಲ. 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಅರೋಪಿಯನ್ನು ಬಂಧಿಸುವ ಸರ್ಕಾರಕ್ಕೆ, ಇಲ್ಲಿ 18 ಕೋಟಿ ಅವ್ಯವಹಾರ ನಡೆದಿದೆ ಎನ್ನುವ ಆರೋಪವಿದ್ದರೂ, ಬಂಧಿಸಬೇಕು ಅನ್ನಿಸೋದೆ ಇಲ್ಲ. ಜಿಲ್ಲೆಗೆ ಬರುವ ಪ್ರಕೃತಿ ವಿಕೋಪದ ಕೊಟ್ಯಾಂತರ ರೂ. ಅನುದಾನಗಳು, ಯಾವುದೋ ನಿರ್ದಿಷ್ಟ ರಾಜಕೀಯ ಹಿತಾಸಕ್ತಿಗಳಿಗೆ ಉಪಯೋಗವಾಗುತ್ತದೆ. ವಾರಾಹಿ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಗಳು ನನೆಗುದಿಗೆ ಬಿದ್ದಿವೆ. ಹತ್ತಾರು ವರ್ಷಗಳಿಂದ ರೈತರ ಗದ್ದೆ ಮುಳುಗಡೆಯಾಗುತ್ತಿದೆ. ಕಾಲುವೆ ಬದಿ ಬಾವಿ ನೀರು ತೆಗೆಯಲೂ ಕಾನೂನಿನ ತೊಡಕು ಬರುವ ಸಾಧ್ಯತೆಯಿದೆ ಎಂದರು.

ಸರ್ವೋತ್ತಮ ಹೆಗ್ಡೆ ಹಾಲಾಡಿ ಮಾತನಾಡಿ, ವರಾಹಿ ಯೋಜನೆಯ ಶುದ್ಧೀಕರಣ ಘಟಕದ ನಿರ್ಮಾಣದಲ್ಲಿ ಆಗುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಸ್ಥಳೀಯರಿಗೆ ಆಗುವ ತೊಂದರೆಗಳ ಬಗ್ಗೆ ವಿರೋಧ ವ್ಯಕ್ತವಾಗಿದೆಯೇ ಹೊರತು, ಕುಡಿಯುವ ನೀರನ್ನು ಕೊಂಡೊಯ್ಯುವ ಕುರಿತು ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಕಾಮಗಾರಿಯ ಹೆಸರಿನಲ್ಲಿ ನಡೆಯುವ ಅವೈಜ್ಞಾನಿಕತೆಯಿಂದಾಗಿ ಪರಿಸರದ ಬಾವಿಯಲ್ಲಿನ ನೀರು ಕಲುಷಿತಗೊಳ್ಳುತ್ತಿದೆ. ಕೃಷಿ ಭೂಮಿಗಳಲ್ಲಿ ತುಂಬಿಕೊಳ್ಳುವ ನೀರಿನಲ್ಲಿ ಅನುಪಯುಕ್ತ ವಸ್ತುಗಳ ತ್ಯಾಜ್ಯಗಳು ಬಂದು ನಿಲ್ಲುತ್ತಿದೆ. ಕಾಮಗಾರಿ ಪ್ರದೇಶದಲ್ಲಿ ಕನಿಷ್ಠ ಆವರಣ ಗೋಡೆಯನ್ನೂ ನಿರ್ಮಿಸಿಲ್ಲ. ಇಲ್ಲಿನ ಅವ್ಯವಸ್ಥೆಯಿಂದಾಗಿ ನೂರಾರು ಎಕ್ರೆ ಪ್ರದೇಶದ ಕೃಷಿ ಭೂಮಿಯಲ್ಲಿ ಕೃಷಿ ಮಾಡಲಾರದ ಸ್ಥಿತಿ ಇದೆ. ಈ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿದಾಗ ಮಾತ್ರ ಮುಂಬರುವ ಅಧಿಕಾರಿಗಳಿಗೂ ಭಯ ಇರುತ್ತದೆ ಎಂದರು.

ಮಾಜಿ ತಾ.ಪಂ ಸದಸ್ಯ ಕೆದೂರು ಸದಾನಂದ ಶೆಟ್ಟಿ, ಕುಂದಾಪುರದಲ್ಲಿ 9 ಸಾವಿರ ಅರ್ಜಿಗಳು ಫಾರಂ 57ರಲ್ಲಿ ಸಲ್ಲಿಸಿದ್ದು, ಅಕ್ರಮ ಸಕ್ರಮ ಮಂಜೂರಾತಿಗೆ ಕಾಯುತ್ತಿವೆ. ಫಾರಂ 53ರಲ್ಲಿ ಸಲ್ಲಿಸಿದ್ದು 2 ಸಾವಿರ ಅರ್ಜಿಗಳಿವೆ. ಡೀಮ್ಡ್ ಪಾರೆಸ್ಟ್, ಜಿಪಿಎಸ್‌ ಸೇರಿದಂತೆ ವಿವಿಧ ಕಾರಣಗಳನ್ನು ಹೇಳಿ ಅರ್ಜಿಯನ್ನು ತಿರಸ್ಕಾರ ಮಾಡುವುದರಿಂದ, ಸಾಮಾನ್ಯ ರೈತರು ಹಾಗೂ ಬಡವರು ಅಪೀಲು ಹೋಗಲೂ ಆಗದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಸಮಸ್ಯೆ ಜಟಿಲವಾಗುವ ಮೊದಲೇ, ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವರಿಕೆ ಮಾಡಿ, ಪರಿಹಾರ ಕ್ರಮಗಳಿಗೆ ಮುಂದಾಗಬೇಕು ಎಂದರು.

ಬ್ರಹ್ಮಾವರದ ಕೃಷಿ ಡಿಪ್ಲೋಮ ಕಾಲೇಜು ವಿದ್ಯಾರ್ಥಿಗಳ ಸೇರ್ಪಡೆ, ದ.ಕ. ಜಿಲ್ಲಾ ಸಕ್ಕರೆ ಕಾರ್ಖಾನೆಯ 18 ಕೋಟಿ ರೂ. ಮಿಕ್ಕಿ ಅವ್ಯವಹಾರದ ತನಿಖೆ, ಕಾಟಾಚಾರದ ಜನಸ್ಪಂದನ ಸಭೆ, ವರಾಹಿ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆ, ಅಕ್ರಮ-ಸಕ್ರಮ ಮತ್ತು ಕುಮ್ಕಿ ಹಕ್ಕು, ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಅವ್ಯವಸ್ಥೆ, ರೈತರ ಪಂಪು ಸೆಟ್‌ಗಳಿಗೆ ಆಧಾರ್ ನಂಬರ್ ನೊಂದಾವಣೆಯ ಸರ್ಕಾರದ ಆದೇಶ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ರೈತ ಸಂಘ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ ಕಿಣಿ, ಪ್ರಮುಖರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಸೀತಾರಾಮ ಗಾಣಿಗ, ಉಮೇಶ್‌ ಶೆಟ್ಟಿ ಶಾನ್ಕಟ್ಟು, ಅಶೋಕ್‌ ಶೆಟ್ಟಿ ಚೋರಾಡಿ, ಶರತ್‌ಕುಮಾರ ಶೆಟ್ಟಿ ಬಾಳಿಕೆರೆ, ವಸಂತ ಹೆಗ್ಡೆ, ಸಂಪಿಗೇಡಿ ಸಂಜೀವ ಶೆಟ್ಟಿ, ಬಾಬು ಶೆಟ್ಟಿ ತಗ್ಗರ್ಸೆ, ಉದಯ ಕುಮಾರ್ ಶೆಟ್ಟಿ ವಂಡ್ಸೆ, ಕೃಷ್ಣದೇವ ಕಾರಂತ ಕೋಣಿ, ರಮೇಶ್ ಗಾಣಿಗ ಕೊಲ್ಲೂರು, ದೇವಾನಂದ ಶೆಟ್ಟಿ ಹಳ್ನಾಡು, ಜಯರಾಮ ಶೆಟ್ಟಿ ಸೂರ್ಗೋಳಿ, ಪ್ರದೀಪ್ ಬಲ್ಲಾಳ್ , ಅಶೋಕ ಪೂಜಾರಿ ಬೀಜಾಡಿ ಇದ್ದರು.


Spread the love

Exit mobile version