ಸರ್ಕಾರಿ ಕಾಲೇಜುಗಳು ಗುಣಮಟ್ಟದ ಶಿಕ್ಷಣಕ್ಕೆ ಮಾದರಿ – ಗಣೇಶ್ ರಾವ್
ಮಂಗಳೂರು : ಜಾತಿ, ಮತ, ಬೇಧವಿಲ್ಲದೆ ಸೌಹಾರ್ದತೆಗೆ ಮಾದರಿಯಾಗುವ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಇಂದು ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೂ ಶ್ರಮಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಕರಾವಳಿ ಸಮೂಹ ವಿದ್ಯಾ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗಣೇಶ್ ರಾವ್ ಅಭಿಪ್ರಾಯಪಟ್ಟರು.
ಮಂಗಳೂರು ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2019-20 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಸಮಾವೇಶದ ಉದ್ಘಾಟನೆಯನ್ನು ನೇರವೇರಿಸಿ ಮಾತಾನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲ್ಲಿ ಯಾವ ರಾಜಕೀಯ ಪ್ರಭಾವಕ್ಕೂ ಒಳಗಾಗದೇ ಸನ್ಮಾರ್ಗದಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಹೆತ್ತವರ, ಶಿಕ್ಷಕರ, ವಿದ್ಯಾರ್ಥಿಗಳ ಜವಾಬ್ದಾರಿ ಮುಖ್ಯವೆಂದು ಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ “ಸುದ್ದಿ ತೇರು”ನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು, ಪ್ರೊ.ಝೇವಿಯರ್ ಡಿ’ಸೋಜಾ, ಮಾತನಾಡಿ ವಿದ್ಯಾರ್ಥಿಗಳನ್ನು ಸಮಾಜಮುಖಿಗಳಾಗಿ ರೂಪಿಸುವಲ್ಲಿ ಹೆತ್ತವರ ಜವಾಬ್ದಾರಿ ಮಹತ್ವದ್ದಾಗಿದ್ದು, ಹೆತ್ತವರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ರೂವಾರಿಗಳು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರು ಪ್ರೊ. ರಾಜಶೇಖರ್ ಹೆಬ್ಬಾರ್ ಸಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಿಸ್ತು ಹಾಗೂ ಗುಣಮಟ್ಟಕ್ಕೆ ನಮ್ಮ ಕಾಲೇಜು ಹೆಸರು ವಾಸಿಯಾಗಿದೆ. ಜಿಲ್ಲೆಯಲ್ಲಿ ಲೀಡ್ ಕಾಲೇಜು ಆಗಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ತರಗತಿಯ ಅವಧಿ ನಂತರದ ಸಮಯವನ್ನು ಮೌಲ್ಯಯುತವಾಗಿ ಸದುಪಯೋಗಪಡಿಸುವಲ್ಲಿ ಹೆತ್ತವರು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿ ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಹೆತ್ತವರು ಯಾವ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.
2019-20ನೇ ಸಾಲಿನ ಶಿಕ್ಷಕ-ರಕ್ಷಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವಿಶೇಷ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.