ಸರ್ಕಾರಿ ನೌಕರರಿಗೆ ಕೂಡಲೇ ಶೇ.30 ಮಧ್ಯಾಂತರ ಪರಿಹಾರ ಘೋಷಣೆಗೆ ಕ್ಯಾ. ಕಾರ್ಣಿಕ್ ಆಗ್ರಹ
ಮಂಗಳೂರು: ಕೇಂದ್ರ ಸರ್ಕಾರ ಹಾಗೂ ಯುಜಿಸಿ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಕೇಂದ್ರ ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸಿದೆ. ರಾಜ್ಯ ಸರ್ಕಾರವು ವೇತನ ಆಯೋಗವನ್ನು ರಚಿಸಿ 4 ತಿಂಗಳಲ್ಲಿ ವರದಿ ನೀಡುವಂತೆ ಆದೇಶ ನೀಡಿ ಪುನ: ಅವಧಿ ವಿಸ್ತರಿಸುವ ಮೂಲಕ ವಿಳಂಬಕ್ಕೆ ಮೊರೆಹೋಗಿದೆ.
ರಾಜ್ಯ ಸರ್ಕಾರಿ ನೌಕರರಲ್ಲಿ ಬಹು ಸಂಖ್ಯೆಯಲ್ಲಿರುವ ಶಿಕ್ಷಕ ಉಪನ್ಯಾಸಕರು ಸೇರಿದಂತೆ ಸರ್ಕಾರಿ ನೌಕರರ ವೇತನ ಶ್ರೇಣಿಗೂ ಕೇಂದ್ರ ಸರ್ಕಾರ ನೌಕರರ ಹಾಗೂ ಇತರೆ ನೆರೆಯ ರಾಜ್ಯ ಸರ್ಕಾರಗಳ ನೌಕರರ ವೇತನ ಶ್ರೇಣಿಗೆ ಹೋಲಿಸಿದಲ್ಲಿ ಶೇ.60 ಕ್ಕೂ ಹೆಚ್ಚು ವ್ಯತ್ಯಾಸ ಕಂಡುಬರುತ್ತಿದೆ. ಸರ್ಕಾರ ಕೂಡಲೆ ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಜನವರಿ 2017 ರಿಂದಲೇ ಪೂರ್ವಾನ್ವಯವಾಗುವಂತೆ ಶೇ.30 ಮಧ್ಯಾಂತರ ಪರಿಹಾರವನ್ನು ಘೋಷಿಸುವಂತೆ ಮಾನ್ಯ ಮುಖ್ಯಮಂತ್ರಿಯವರನ್ನು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಆಗ್ರಹಿಸಿದ್ದಾರೆ.
ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಹೋರಾತ್ರಿ ಧರಣಿ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಿ ಆದೇಶವನ್ನು ಹೊರಡಿಸದೆ ಶಿಕ್ಷಕರನ್ನು ನಿರಾಶೆಗೊಳಿಸಿದೆ. ಸರ್ಕಾರ ಶಿಕ್ಷಕರ ಹಾಗೂ ಸರ್ಕಾರಿ ನೌಕರರ ಬೇಡಿಕೆಗಳಿಗೆ ತಾತ್ಸಾರ ಮನೋಭಾವದಿಂದ ನೋಡುವುದನ್ನು ಬಿಟ್ಟು ಕೂಡಲೇ ಶೇ. 30 ಮಧ್ಯಾಂತರ ಪರಿಹಾರವನ್ನು ಘೋಷಿಸುವಂತೆ ಹಾಗೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ನೀಡಿದ ಭರವಸೆಯಂತೆ ಕೂಡಲೇ ಸರ್ಕಾರಿ ಅದೇಶವನ್ನು ಹೊರಡಿಸುವಂತೆ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.